ಸೋಮವಾರಪೇಟೆ, ಜ. 5: ಕುಶಾಲನಗರದಲ್ಲಿ ತಾ. 10 ಮತ್ತು 11 ರಂದು ಆಯೋಜಿಸಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಸಿ. ರಾಜಶೇಖರ್ ಅವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಅಭಿನಂದಿಸಲಾಯಿತು.
ರಾಜಶೇಖರ್ ಅವರ ಮನೆಗೆ ತೆರಳಿದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಫಲ-ತಾಂಬೂಲ ನೀಡಿ ಅಭಿನಂದಿಸಿದರಲ್ಲದೆ, ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಸಮ್ಮೇಳನದಲ್ಲಿ ಜಿಲ್ಲೆಯ ಹತ್ತು ಹಲವು ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.
ಈ ಸಂದರ್ಭ ಪರಿಷತ್ತಿನ ಪದಾಧಿಕಾರಿಗಳಾದ ಪ್ರೇಮ್ಕುಮಾರ್, ಶಿವಕುಮಾರ್, ಮೃತ್ಯುಂಜಯ, ಶೀಲಾ ಡಿಸೋಜಾ, ಮಂಜುಳಾ, ಲೀಲಾ ನಿರ್ವಾಣಿ ಮತ್ತಿತರರು ಹಾಜರಿದ್ದರು. ನಿವೃತ್ತ ಸರ್ಕಾರಿ ನೌಕರರ ಸಂಘದ ಸ್ಥಾಪಕಾಧ್ಯಕ್ಷರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ರಾಜಶೇಖರ್ ಅವರನ್ನು ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಪದಾಧಿಕಾರಿಗಳಾದ ಬಿ.ಕೆ. ತಿಮ್ಮಯ್ಯ, ಕುಟ್ಟಪ್ಪ, ಹೆಚ್.ಆರ್. ನಾಗೇಂದ್ರನಾಥ್, ಬಿ.ಪಿ. ಬಸಪ್ಪ, ಹೆಚ್.ಆರ್. ದಾಮೋದರ್, ಜಿ.ಎಸ್. ಸುಂದರ ಮತ್ತಿತರರು ಅಭಿನಂದಿಸಿದರು.