ಕುಶಾಲನಗರ, ಜು. 30: ಶನಿವಾರ ನಿಧನರಾದ ಕೊಡಗು ಜಿಲ್ಲೆಯ ಹಿರಿಯ ಸಾಹಿತಿಗಳಾದ ಎದುರ್ಕಳ ಕೆ.ಶಂಕರನಾರಾಯಣ ಭಟ್ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ಕುಶಾಲನಗರದಲ್ಲಿ ನಡೆಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಭೆ ಸೇರಿ ಒಂದು ನಿಮಿಷ ಮೌನಾಚರಣೆ ನಡೆಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಲಾಯಿತು.
ಈ ಸಂದರ್ಭ ಉಪಸ್ಥಿತರಿದ್ದ ಭಟ್ ಅವರ ಸಹಪಾಠಿ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಅಗಲಿದ ಶಂಕರನಾರಾಯಣ ಭಟ್ ಒಡನಾಟದ ಬಗ್ಗೆ ಸ್ಮರಿಸಿದರು. ಲೋಕಪಾವನೆ ಕಾವೇರಿಯ ಕುರಿತಾದ ಅಪೂರ್ವ ಗ್ರಂಥ ಶ್ರೀ ಕಾವೇರಿ ವೈಭವ, ಹಿಂದೂ ಧರ್ಮದ ಪರಿಚಯ ಮಾಡುವ ನಿಟ್ಟಿನಲ್ಲಿ ತತ್ವ ಹಾಗೂ ಅನುಷ್ಠಾನಗಳ ಬಗೆಗೆ ವೇದ ಕಾಲದಿಂದ ಆಧುನಿಕ ಕಾಲದ ತನಕ ಸಾಗಿ ಬಂದ ವಿಚಾರಧಾರೆಯ ಹಿನ್ನೆಲೆಯಲ್ಲಿ ರೂಪುಗೊಂಡ ಲೇಖನಗಳು ಸೇರಿದಂತೆ ಹಲವು ಕೃತಿಗಳನ್ನು ಬರೆದಿರುವ ಬಗ್ಗೆ ಮಾಹಿತಿ ಒದಗಿಸಿದರು.
60 ರ ದಶಕದಲ್ಲಿ ಜಿಲ್ಲೆಯ ದಿನಪತ್ರಿಕೆಯಲ್ಲಿ ಎಳೆಯರ ಬದುಕು, ಬೆಳಗಲು ಬೆಳಕು ಎಂಬ ಲೇಖನಗಳನ್ನು ಬರೆಯುತ್ತಿದ್ದ ಬಗ್ಗೆ ಅಪ್ಪಣ್ಣ ಅವರು ನೆನಪಿಸಿದರು.
ಈ ಸಂದರ್ಭ ಹಿರಿಯರಾದ ವಿ.ಎನ್.ವಸಂತಕುಮಾರ್, ನಿವೃತ್ತ ಉಪನ್ಯಾಸಕ ಸಬಲಂ ಭೋಜಣ್ಣ ರೆಡ್ಡಿ ಮಾತನಾಡಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕÀ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ನಿಡ್ಯಮಲೆ ದಿನೇಶ್, ಭಾಸ್ಕರ್ ನಾಯಕ್, ಲಕ್ಷ್ಮಿನಾರಾಯಣ, ಮಂಜುನಾಥ್, ಉದ್ಯಮಿಗಳಾದ ಬಿ.ಆರ್. ನಾಗೇಂದ್ರಪ್ರಸಾದ್, ಕೆ.ಕೆ. ಭಾಸ್ಕರ್, ಬಿ.ಎಲ್.ಸತ್ಯ ಮತ್ತಿತರರು ಇದ್ದರು.