ಕೂಡಿಗೆ, ಸೆ. 30: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಸಮರ್ಪಕವಾಗಿ ಮಳೆ ಬೀಳದ ಹಿನ್ನೆಲೆ ಹಾಗೂ ಹಾರಂಗಿ ಜಲಾಶಯ ಭರ್ತಿಯಾದರೂ ನೀರಿನ ಸಂಗ್ರಹಣೆಯನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸದೆ, ಸುಪ್ರೀಂ ಕೋರ್ಟ್‍ನ ಆದೇಶ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಕಡಿಮೆ ಹಂತದಲ್ಲಿ ನೀರಿನ ಮಟ್ಟ ಏರಿಳಿತವಾಗುತ್ತಿದ್ದರೂ ನೀರನ್ನು ವಿದ್ಯುತ್ ಘಟಕದ ಮೂಲಕ ನದಿಗೆ ಹರಿಬಿಡಲಾಯಿತು. ಇತ್ತ ಈ ನೀರನ್ನೇ ನಂಬಿ ವ್ಯವಸಾಯ ಮಾಡಿದ್ದ ರೈತರು ಈಗ ತಮ್ಮ ಜಮೀನುಗಳಿಗೆ ನೀರಿಲ್ಲದೆ, ವರ್ಷಂಪ್ರತಿಯಂತೆ ಉತ್ತಮವಾಗಿ ಬೇಸಾಯ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಸಾಲಿನಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದು ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಾವಿರಾರು ರೈತರು ಒಕ್ಕೊರಲಿನ ತೀರ್ಮಾನ ಕೈಗೊಂಡರು.

ಕೂಡುಮಂಗಳೂರು ಶ್ರೀ ರಾಮಲಿಂಗೇಶ್ವರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಕೆ.ಕೆ. ಹೇಮಂತ್ ಕುಮಾರ್ ವಹಿಸಿ, ಮಾತನಾಡಿ, ರೈತರ ಒಕ್ಕೊರಲಿನ ತೀರ್ಮಾನವನ್ನು ಅಂಗೀಕರಿಸುವದರ ಮೂಲಕ ಜಿಲ್ಲಾ ಮಟ್ಟದ ಸಹಕಾರ ಸಂಘದ ಸಭೆಯಲ್ಲಿ ಚರ್ಚಿಸಲಾಗುವದು. ರೈತರ ತೀರ್ಮಾನವನ್ನು ಲಿಖಿತವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೂ ಮತ್ತು ಸ್ಥಳೀಯ ಶಾಸಕರಿಗು ನೀಡಲಾಗುವದು. ಸಾಲ ಮನ್ನದ ಬಗ್ಗೆ ಆಡಳಿತ ಮಂಡಳಿಯೂ ರೈತರೊಂದಿಗೆ ಹೋರಾಟಕ್ಕೆ ಸಿದ್ಧರಿರುವದಾಗಿ ತಿಳಿಸಿದರು.

3600 ಕ್ಕೂ ಹೆಚ್ಚು ಸಹಕಾರ ಸಂಘದ ಸದಸ್ಯರನ್ನು ಹೊಂದಿರುವ ಈ ಸಂಘವು ಇಂದು ಹಾಜರಿದ್ದ 1800 ಸದಸ್ಯರ ಸಹಿಯನ್ನು ಪಡೆಯುವದರ ಮೂಲಕ ಸಾಲಮನ್ನ ಮಾಡಲು ಆಗ್ರಹದ ವಿಚಾರಕ್ಕೆ ಒಪ್ಪಿಗೆ ನೀಡಲಾಯಿತು. ಇದಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಈ ಸಂದರ್ಭ ಚರ್ಚಿಸಲಾಯಿತು.

ಈ ಮನವಿಯನ್ನು ಜಿಲ್ಲಾಧಿಕಾರಿಯವರು ಪರಿಶೀಲಿಸಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪಂಧಿಸಿ ಸರಕಾರಕ್ಕೆ ಈ ಮನವಿಯನ್ನು ಮುಟ್ಟಿಸಬೇಕೆಂದು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಆಗ್ರಹಿಸಿದರು.

ಸಭೆಯಲ್ಲಿ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಹಾಗೂ ಬ್ಯಾಂಕಿನ ವ್ಯವಸ್ಥಾಪಕಿ, ಸಿಬ್ಬಂದಿ ವರ್ಗ ಹಾಜರಿದ್ದರು.

ಕುಶಾಲನಗರ ಹೋಬಳಿ ವ್ಯಾಪ್ತಿಯ ತೊರೆನೂರು ಸಹಕಾರ ಸಂಘದ ವಾಪ್ತಿಗೆ ಒಳಪಡುವ ನೀರು ಬಳಕೆದಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿಯೂ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.