ಸುಂಟಿಕೊಪ್ಪ, ಡಿ. 23: ಪ್ರಸಕ್ತ ವರ್ಷ ಹವಾಮಾನ ವೈಪರಿತ್ಯ ದಿಂದಾಗಿ ಬೆಳೆಗೆ ಹಾನಿಯಾಗಿದ್ದು, ಬರಗಾಲ ಬಂದಿದೆ. ರೈತರ ಸಾಲ ಮನ್ನಾ ಮಾಡಲು ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕೆಂದು ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಹೇಳಿದರು. ಗದ್ದೆಹಳ್ಳದ ಪಟ್ಟೆಮನೆ ಲೋಕೇಶ್ ಅವರ ಮನೆಯಲ್ಲಿ ಆಕಸ್ಮಿಕವಾಗಿ ಮೃತರಾದ ಬೈಮನ ಪ್ರಕಾಶ್ ಅವರ ಕುಟುಂಬಕ್ಕೆ ಸರಕಾರದಿಂದ ನೀಡಲಾಗಿದ್ದ ರೂ. 1 ಲಕ್ಷ ಮೊತ್ತದ ಚೆಕ್‍ಅನ್ನು ವಿತರಿಸಿ ಮಾತನಾಡಿದರು. ರೈತರು ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಸರ್ಕಾರದಿಂದ ರೈತರಿಗೆ ಸಬ್ಸಿಡಿ ಆಧಾರದಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಮಾತನಾಡಿ, ಸೋಮವಾರಪೇಟೆ ತಾಲೂಕು ಪ್ರಸಕ್ತ ವರ್ಷ ಬರಪೀಡಿತ ಪ್ರದೇಶವಾಗಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಿಡುವಳಿ ದಾರರಿಗೆ ಪರಿಹಾರ ಸಿಗಲಿದೆ ಅದಕ್ಕೆ ಮಾರ್ಚ್ ತಿಂಗಳ ಒಳಗೆ ಕೃಷಿ ಇಲಾಖೆಗೆ ರೈತರು ಮಾಹಿತಿ ನೀಡಬೇಕು ಎಂದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿ, ಹಿರಿಯ ಕೃಷಿಕರು ಹಾಗೂ ಸುಂಟಿಕೊಪ್ಪ ನಾಡು ಗೌಡ ಸಮಾಜದ ಅಧ್ಯಕ್ಷ ಉಲ್ಲಾಸ್ ಉಪಸ್ಥಿತರಿದ್ದರು. ಉಲುಗುಲಿ ನಾರ್ಗಾಣೆ ಗ್ರಾಮದ ಕೃಷಿಕರು ಇದ್ದರು.
ಲೀಲಾವತಿ ಪ್ರಾರ್ಥಿಸಿ, ಸುಂಟಿಕೊಪ್ಪ ಕೃಷಿ ಇಲಾಖೆ ಅಧಿಕಾರಿ ಬೋಪಯ್ಯ ಸ್ವಾಗತಿಸಿ, ನವ್ಯ ನಾಣಯ್ಯ ವಂದಿಸಿದರು.