ಸೋಮವಾರಪೇಟೆ, ಸೆ. 27: ಸಹಕಾರಿ ಸಂಘಗಳಲ್ಲಿ ಪಡೆದ ಸಾಲದ ಅಸಲನ್ನು ಪಾವತಿಸಲು ನೀಡಿರುವ ಕಾಲಾವಕಾಶವನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ಇಲ್ಲಿನ ತಾಲೂಕು ಕಾಫಿ ಬೆಳೆಗಾರರ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಈ ಕುರಿತು ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಮತ್ತು ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿ, ಈಗಾಗಲೇ ರಾಜ್ಯಾದಾದ್ಯಂತ ರೈತ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಆತ್ಯಹತ್ಯೆಯ ಹಾದಿ ಹಿಡಿದಿದ್ದಾರೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬ್ಯಾಂಕ್ನಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಲಾಗದ ಪರಿಸ್ಥಿತಿಯನ್ನು ಸರಕಾರ ಅರಿಯಬೇಕಿದೆ.
ಸಹಕಾರಿ ಸಂಸ್ಥೆಗಳಲ್ಲಿ ರೈತರು ಪಡೆದ ಸಾಲದ ಅಸಲನ್ನು ಪಾವತಿಸಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಿಸಿರುವದು ರೈತ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಸ್ವಲ್ಪ ಮಟ್ಟಿಗೆ ಪಾರು ಮಾಡಿದಂತಾಗಿದೆ. ಈ ಸೌಲಭ್ಯವನ್ನು 2016ರ ತಾ. 30 ರವರೆಗೆ ಗಡುವು ನೀಡಿರುವದು ಸರಿಯಷ್ಟೇ. ಆದರೆ ಮಲೆನಾಡಿನ ಭಾಗದ ರೈತ ಬೆಳೆಗಾರರು ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುತ್ತಿದ್ದು, ವರ್ಷಕ್ಕೊಮ್ಮೆ ಮಾತ್ರ ಆದಾಯ ನಿರೀಕ್ಷಿಸಬಹುದಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಯಾವದೇ ಆದಾಯ ಇಲ್ಲದಿರುವದರಿಂದ ರೈತ ಬೆಳೆಗಾರರು ಸಹಕಾರಿ ಸಂಸ್ಥೆಗಳಲ್ಲಿ ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಕಷ್ಟ ಸಾಧ್ಯ.
ಈ ಹಿನ್ನೆಲೆಯಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ರೈತ ಬೆಳೆಗಾರರು ಪಡೆದಿರುವ ಸಾಲದ ಅಸಲನ್ನು ಪಾವತಿಸಿದರೆ, ಬಡ್ಡಿ ಮನ್ನಾ ಮಾಡುವ ಸೌಲಭ್ಯವನ್ನು 2017ರ ಮಾರ್ಚ್ ಅಂತ್ಯದವರೆಗೂ ವಿಸ್ತರಿಸಬೇಕೆಂದು ರಾಜ್ಯದ ಮುಖ್ಯಮಂತ್ರಿಗಳು, ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಮೋಹನ್ ಬೋಪಣ್ಣ ತಿಳಿಸಿದ್ದಾರೆ.