ಮಡಿಕೇರಿ, ಜು. 5: ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಯುವತಿಯೋರ್ವಳ ಕುಟುಂಬಕ್ಕೆ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸ್ಪಂದಿಸಿದ್ದು, ಸಾಧ್ಯವಾದ ನೆರವು ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ.ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ಸಣ್ಣಶೆಟ್ಟಿ ಎಂಬವರ ಮಗಳಾದ ಸುಮ ಕೆ.ಎಸ್. (19 ವರ್ಷ)ಗೆ ಎರಡು ಕಿಡ್ನಿಗಳು ವಿಫಲವಾಗಿದ್ದು, ತಂದೆ - ತಾಯಿಗಳ ಆರೋಗ್ಯವು ಕೂಡ ಹದಗೆಟ್ಟಿದೆ. ಇದನ್ನು ಗಮನಿಸಿದಂತಹ ಸಾಯಿ ಶಂಕರ ವಿದ್ಯಾಸಂಸ್ಥೆಯ ಕಾಲೇಜು ವಿಭಾಗದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಅವರಿಗೆ, ಶ್ರೀ ಸಾಯಿ ಶಂಕರ ಸ್ವಾಮಿಯವರ ವೈಕುಂಠ ಆರಾಧನೆಯ ಸ್ಮರಣಾರ್ಥಕವಾಗಿ ಸುಮ ಅವರ ಕುಟುಂಬಕ್ಕೆ ಧನ ಸಹಾಯ ಹಾಗೂ ದಿನ ಬಳಕೆ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಆಕೆ ಗುಣಮುಖಳಾಗುವಂತೆ ಹಾರೈಸಿ ನಡೆದ ಈ ಸೇವಾ ಕಾರ್ಯದಲ್ಲಿ ಸಂಸ್ಥೆಯ ಅಧ್ಯಕ್ಷ ಝರು ಗಣಪತಿ ಮತ್ತು ಕಾರ್ಯದರ್ಶಿ ಗೀತಾ ಗಣಪತಿ ಹಾಗೂ ಕಾಲೇಜಿನ ಪ್ರಾಂಶುಪಾಲ ಬೀರೇಗೌಡರು, ಉಪನ್ಯಾಸಕರು, ವಿದ್ಯಾರ್ಥಿಗಳು, ಬಿ.ಇಡಿ, ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.