ಮಡಿಕೇರಿ, ಡಿ. 8: ಜನತೆಯ ಮಧ್ಯೆ ಸಾಂಸ್ಕøತಿಕ ಸಾಮರಸ್ಯ ಹೆಚ್ಚಾಗಬೇಕು. ಸಾಮರಸ್ಯದಿಂದ ಕಾರ್ಯಕ್ರಮ ಹಾಗೂ ಕಾರ್ಯಕ್ರಮಗಳಿಂದ ಸಾಮರಸ್ಯ ಮೂಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.ಇಂದು ತೆರೆಕಂಡ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಕಳೆದೆರಡು ದಿನಗಳಿಂದ ನಡೆದ ಸಂಗಮ ಸಂಭ್ರಮ-2016 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಅನತೆಯ ಮಧ್ಯೆ ಸಾಂಸ್ಕøತಿಕ ಸಾಮರಸ್ಯ ಬಲಗೊಳ್ಳಬೇಕು. ರಾಜ್ಯದ ವಿವಿಧ ಆಚಾರ-ವಿಚಾರ, ಸಂಸ್ಕøತಿಯ ಕಾರ್ಯಕ್ರಮಗಳು ಇಲ್ಲಿ ನಡೆದಿದೆ. ವಿವಿಧ ಸಂಸ್ಕøತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಯುವಕರಿಗೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ತಿಳಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ವಾಟ್ಸಾಪ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಹೆಚ್ಚು ತಲ್ಲೀನರಾಗಿರುತ್ತಾರೆ. ಯುವಕರಿಗೆ ಓದುವ ಹವ್ಯಾಸ ಕಡಿಮೆ ಇದ್ದು, ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇಂತಹ ಸಂಸ್ಕøತಿ ಬಿಂಬಿಸುವ ಕಾರ್ಯಕ್ರಮದಲ್ಲಿ ಯುವಕರನ್ನು ಹೆಚ್ಚು ಸೇರಿಸುವ ಪ್ರಯತ್ನವಾಗಬೇಕಿದೆ.
(ಮೊದಲ ಪುಟದಿಂದ) ಸ್ಥಳೀಯ ಭಾಷೆಗಳನ್ನು ಇತರಿಗೆ ಕಲಿಸುವ ನಿಟ್ಟಿನಲ್ಲಿ ಅಕಾಡೆಮಿಗಳು ತರಬೇತಿ ಶಿಬಿರಗಳನ್ನು ಆಯೋಜಿಸಬೇಕು. ಇದರಿಂದ ಸ್ಥಳೀಯ ಭಾಷೆಗೆ ಹೆಚ್ಚು ಆದ್ಯತೆ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಸಂಗಮ-ಸಂಭ್ರಮ ಕಾರ್ಯಕ್ರಮದಿಂದಾಗಿ ವಿವಿಧೆಡೆಯ ಕಲಾ ಪ್ರಕಾರಗಳನ್ನು ಒಂದೆಡೆ ವೀಕ್ಷಿಸಲು ಅವಕಾಶ ದೊರಕಿದೆ. ಜಿಲ್ಲೆಯ ಜನರ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ ಸಹಕಾರ ಇದೆ. ಮದುವೆ ಮತ್ತಿತರ ಸಮಾರಂಭಗಳಲ್ಲಿ ಜನತೆಯ ಪಾಲ್ಗೊಳ್ಳುವಿಕೆ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಸಂಗಮ-ಸಂಭ್ರಮ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಕೊರತೆ ನೋಡಿದಾಗ ಕಲೆಯ ಕೊಂಡಿ ಕಳಚಿದೆಯೇ ಎಂಬ ಭಾವನೆ ಮೂಡುತ್ತಿದೆ ಎಂದು ವಿಷಾದಿಸಿದ ಅವರು ಕಲೆ ಜೀವನದ ಕೊಂಡಿಯಾಗಿದೆ. ಅಕಾಡೆಮಿಯ ಕಾರ್ಯಕ್ರಮಗಳನ್ನು ಎಲ್ಲರೂ ಶ್ಲಾಘಿಸುವ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳಿಂದ ನೋಡುಗರಿಗೆ ಹಾಗೂ ಭಾಗವಹಿಸಿದವರಿಗೂ ಸ್ಫೂರ್ತಿ ಸಿಕ್ಕಿದಂತಾಗುತ್ತದೆ. ಕಲೆಯ ಆರಾಧನೆಯಿಂದ ಭೂತಕಾಲ, ವರ್ತಮಾನಕಾಲ ಹಾಗೂ ಭವಿಷ್ಯತ್ ಕಾಲವನ್ನು ಜೋಡಿಸಿದಂತಾಗುತ್ತದೆ. ಕಲಾವಿದರನ್ನು ಗೌರವಿಸುವ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕೊಡಗು ಜಿಲ್ಲೆ ವಿಭಿನ್ನ ಭೌಗೋಳಿಕ ಹಿನ್ನಲೆ ಇರುವ ಗುಡ್ಡಗಾಡು ಪ್ರದೇಶವಾಗಿದೆ. ಜಿಲ್ಲೆಯಲ್ಲಿ ಅನೇಕ ಕಲಾವಿದರಿದ್ದಾರೆ. ರಾಜ್ಯದ ಇತರೆ ಪ್ರದೇಶಗಳಲ್ಲಿ ಕಾರ್ಯಕ್ರಮ ಆಯೋಜಿಸುವಾಗ ಇಲ್ಲಿನ ಕಲಾವಿದರಿಗೆ ಹೆಚ್ಚಿನ ಕಾರ್ಯಕ್ರಮ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಬಾರ ನಿರ್ದೇಶಕ ಎಸ್.ಐ. ಭಾವಿಕಟ್ಟಿ ಮಾತನಾಡಿ, ಸಂಸ್ಕøತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳ ಅಗತ್ಯವಿದೆಯೇ ಎಂಬ ಬಗ್ಗೆ ವಿಧ್ವಾಂಸರು ವಿಚಾರವಂತರು ಚಿಂತನೆ ಮಾಡಬೇಕಿದೆ. ಅಕಾಡೆಮಿಗಳು ಒಂದು ವಾರದಲ್ಲಿ ಯೋಜನೆ ಮಾಡಿ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಮಾಡಿದ್ದಾರೆ. ಆದರೆ ಇಲ್ಲಿ ಪ್ರೇಕ್ಷಕರ ಕೊರತೆ ಕಂಡುಬಂದಿದೆ. ಎಲ್ಲರೂ ಪಾಲ್ಗೊಳ್ಳುವಂತೆ ಮಾಡುವ ಅಗತ್ಯವಿದೆ. ಮಕ್ಕಳಿಗೆ ಇಂದು ಅಭದ್ರತೆ ಕಾಡುತ್ತಿದ್ದು, ಸಾಹಿತ್ಯದಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಉತ್ತಮ ಮಕ್ಕಳನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.
ಪೂರ್ವಜರು ಉಪಯೋಗಿಸಿ ದಂತಹ ಪರಿಕರ ಸಾಕ್ಷ್ಯ ಚಿತ್ರ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಅದನ್ನು ದೊರೆಯುವಂತೆ ಮಾಡಲು ಅಕಾಡೆಮಿಗಳು ಯೋಜನೆ ರೂಪಿಸಬೇಕು ಎಂದರು.
ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಪ್ರೇಕ್ಷಕರ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿ, ಮನೆಗಳಲ್ಲೇ ಕುಳಿತು ಟಿವಿ ನೋಡುವವರು ಮುಂದಿನ ಕಾರ್ಯಕ್ರಮಗಳಲ್ಲಿ ನೇರವಾಗಿ ಸಭಾಂಗಣಕ್ಕೆ ಬಂದು ವೀಕ್ಷಿಸಿ ಕಲೆಗೆ ಪ್ರೋತ್ಸಾಹ ನೀಡಬೇಕು. ಪ್ರೇಕ್ಷಕರ ಕೊರತೆ ತೀರಾ ನಿರಾಶೆ ತಂದಿದೆ ಎಂದ ಅವರು, ತಾ. 11 ರಂದು ಸುಳ್ಯದಲ್ಲಿ ಅರೆಭಾಷೆ ಅಕಾಡೆಮಿ ಹಾಗೂ ಪೊನ್ನಂಪೇಟೆಯಲ್ಲಿ ಕೊಡವ ಅಕಾಡೆಮಿ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ನೇರವಾಗಿ ಪಾಲ್ಗೊಂಡು ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ಸಣ್ಣಪುಟ್ಟ ವಿಚಾರಗಳಿಗೆ ಯಾರೂ ತಲೆಕೆಡಿಸಿಕೊಳ್ಳದೆ ಎಲ್ಲರೂ ಸಾಮರಸ್ಯದಿಂದ ಬದುಕಬೇಕು. ಯುವ ಜನತೆ ಸಾಮಾಜಿಕ ಜಾಲ ತಾಣಗಳಲ್ಲಿ ಮುಳುಗದೇ ಸಾಮಾಜಿಕ ಜಾಲ ತಾಣಗಳಿಂದ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳುವಂತೆ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಚೆನ್ನೂರು ಪ್ರಾಸ್ತಾವಿಕವಾಗಿ ರಾಜ್ಯದ ಎಲ್ಲಾ ಅಕಾಡೆಮಿಗಳನ್ನು ಒಂದೇ ವೇದಿಕೆಯಡಿ ತರುವ ಕೆಲಸವಾಗಿದೆ. ಕಲೆ, ಸಂಸ್ಕøತಿಯನ್ನು ಪ್ರೋತ್ಸಾಹಿಸಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಅಧ್ಯಕ್ಷ ಮಹದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಇದ್ದರು. ಅಕಾಡೆಮಿ ರಿಜಿಸ್ಟಾರ್ ಉಮರಬ್ಬ ಸ್ವಾಗತಿಸಿ, ಸಾಹಿತಿ ಕೋರನ ಸರಸ್ವತಿ ವಂದಿಸಿದರು.