ಒಡೆಯನಪುರ, ಅ. 3: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣ ದಲ್ಲಿ ನಡೆಯಿತು.

ಸಂಘದಲ್ಲಿ 1861 ಮಂದಿ ಸದಸ್ಯರಿದ್ದು ಪ್ರಸಕ್ತ ಸಾಲಿನಲ್ಲಿ ಸಂಘ ರೂ. 14 ಲಕ್ಷದ 89 ಸಾವಿರ ನಿವ್ವಳ ಲಾಭಗಳಿಸಿದ್ದು, ಸಂಘದ ಪಾಲು ಬಂಡವಾಳ ರೂ. 79 ಲಕ್ಷಗಳಾಗಿದೆ ಎಂದು ಸಭೆಯಲ್ಲಿ ಸಂಘದ ಅಧ್ಯಕ್ಷರು ತಿಳಿಸಿದರು. ಸಭೆಯಲ್ಲಿ ಲಾಭಾಂಶ ದಲ್ಲಿ ಶೇ. 9 ರಷ್ಟು ಡಿವಿಡೆಂಡ್ ಫಂಡ್ ಅನ್ನು ಏರಿಕೆ ಮಾಡುವಂತೆ ತೀರ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ, ಸಂಘದ ಅಭಿವೃದ್ಧಿಗಾಗಿ ಸಂಘದ ಸದಸ್ಯರು ಶ್ರಮಿಸಬೇಕು. ಸಂಘದಲ್ಲಿ ಯಶಸ್ವಿನಿ ಆರೋಗ್ಯ ಯೋಜನೆಯಲ್ಲಿ ನೋಂದಾವಣೆ ಮಾಡಿಸಿಕೊಂಡ ಸದಸ್ಯರು ಹಲವಾರು ರೀತಿಯ ಚಿಕಿತ್ಸೆಗಳನ್ನು ಪಡೆದುಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯಶಸ್ವಿನಿ ನೋಂದಾವಣೆ ಮಾಡಿಸಿಕೊಳ್ಳುವದು ಉತ್ತಮ ಎಂದರು. ಸಭೆಯಲ್ಲಿ ನಿರ್ದೇಶಕರು ಗಳಾದ ಹೆಚ್.ಬಿ. ಶೇಷಾದ್ರಿ, ಡಿ.ಬಿ. ಧರ್ಮಪ್ಪ, ಹೆಚ್.ಪಿ. ಮೋಹನ್, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಪಿ. ಚಿಣ್ಣಪ್ಪ, ಪ್ರಮುಖರಾದ ಎಸ್.ಎಂ. ಉಮಾಶಂಕರ್, ಹೆಚ್.ಡಿ. ಪುಟ್ಟಪ್ಪ, ಡಿ.ಬಿ. ವಸಂತ್ ಮುಂತಾದವರಿದ್ದರು.