ಸೋಮವಾರಪೇಟೆ,ನ.14: ಬ್ಯಾಂಕಿಂಗ್ ಕ್ಷೇತ್ರ ಪ್ರಾರಂಭವಾಗುವದಕ್ಕೂ ಮೊದಲೇ ಸಹಕಾರ ಸಂಘಗಳು ರೈತರ ಒಡನಾಡಿಯಾಗಿ ಕೆಲಸ ಮಾಡಿವೆ. ಪ್ರಸ್ತುತ ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಬೆಳೆ ಸಾಲವನ್ನು 10ಲಕ್ಷಕ್ಕೆ ಏರಿಸಬೇಕು. ರೈತರು ಪಡೆಯುವ ಟ್ರ್ಯಾಕ್ಟರ್, ಟಿಲ್ಲರ್ ಅಥವಾ ಪಿಕ್‍ಅಪ್ ವಾಹನಗಳಿಗೆ ಶೇಕಡ 0 ಬಡ್ಡಿದರದಲ್ಲಿ ಸಾಲ ನೀಡಲು ಸಹಕಾರ ಸಂಘಗಳು ಮುಂದಾಗಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಲಹೆ ನೀಡಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಮಹಿಳಾ ಸಹಕಾರ ಸಂಘಗಳು, ಎ.ಪಿ.ಸಿ.ಎಂ.ಎಸ್. ತಾಲೂಕು ಸಹಕಾರ ಕೂಟ, ಪಿಕಾರ್ಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ 63ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರವು ರೈತರಿಗೆ ಆರ್ಥಿಕ ನೆರವಿನೊಂದಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವ ಕ್ಷೇತ್ರವಾಗಿರುವದರಿಂದ ಈ ಕ್ಷೇತ್ರವನ್ನು ಮತ್ತಷ್ಟು ಬಲ ಪಡಿಸುವ ಅಗತ್ಯತೆ ಇದೆ ಎಂದ ಅವರು, ರಾಜ್ಯದಲ್ಲಿ ಬರಗಾಲ ಇರುವದರಿಂದ ಹಾಗೂ ರಾಜ್ಯದ ಹೆಚ್ಚು ಸಹಕಾರಿಗಳು ಕೃಷಿಕರಾಗಿರುವದರಿಂದ ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಆಗಬೇಕು. ಜಿಲ್ಲೆಯ ಬಹುತೇಕ ರಾಜಕಾರಣಿಗಳು ಸಹಕಾರ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಜಕೀಯ ಪ್ರವೇಶಿಸಿದ್ದಾರೆ. ಆದರೆ ಸಹಕಾರ ಸಂಘಗಳಲ್ಲಿ ರಾಜಕೀಯ ನುಸುಳಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯ ರೈತರು ಪರಿಸರವನ್ನು ಉಳಿಸುವದರೊಂದಿಗೆ ತಮ್ಮ ಕಾಫಿ ತೋಟವನ್ನು ಸುಸ್ಥಿತಿಯಲ್ಲಿ ನಿರ್ವಹಣೆ ಮಾಡಬೇಕು. ಸಹಕಾರ ಸಂಘದಲ್ಲಿ ಸಾಲ ಪಡೆದರೆ ಸಕಾಲದಲ್ಲಿ ಮರುಪಾವತಿಯನ್ನು ಮಾಡುವ ಮೂಲಕ ಸಹಕಾರ ಕ್ಷೇತ್ರದ ಪ್ರಗತಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಹಿರಿಯ ಸಹಕಾರಿಗಳನ್ನು ಸನ್ಮಾನಿಸಿದ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಮನು ಮುತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಪರಸ್ಪರ ನಂಬಿಕೆ ಮುಖ್ಯ. ಯಾವದೇ ಫಲಾಪೇಕ್ಷೆ ಇಲ್ಲದೆ ನಮ್ಮ ಜಿಲ್ಲೆಯ ಹಿರಿಯ ಸಹಕಾರಿಗಳು ಕೆಲಸ ಮಾಡಿರುವದರಿಂದ ಜಿಲ್ಲೆಯ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ದವಸ ಭಂಡಾರ, ಕಿತ್ತಳೆ ಬೆಳೆಗಾರರ ಸಂಘ, ಏಲಕ್ಕಿ ಸೊಸೈಟಿ, ಮಹಿಳಾ ಸಹಕಾರ ಸಂಘಗಳು ಕೂಡ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಂದಿನ ದಿನಗಳಲ್ಲಿ ಸಹಾಯ ಹಸ್ತವನ್ನು ನೀಡಿವೆ. ಜಿಲ್ಲೆಯಲ್ಲಿ ಇಂದಿಗೂ 17 ಮಹಿಳಾ ಸಹಕಾರ ಸಂಘಗಳು ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಇಂದು ಹಣವೇ ಮೇಳೈಸುತ್ತಿದೆ. ಆದರೆ ಸಹಕಾರಿ ರಂಗದಲ್ಲಿ ಜನರಿಗೆ ಹೆಚ್ಚಿನ ಮಹತ್ವ ಇದೆ. ಸಹಕಾರ ರಂಗದಲ್ಲಿ ಉತ್ತಮ ಕೌಶಲ್ಯವನ್ನು ಪಡೆಯಬೇಕಾದರೆ ಶಿಕ್ಷಣ ಮತ್ತು ತರಬೇತಿ ಬಹು ಮುಖ್ಯ ಎಂದರು.

ಶಿಕ್ಷಣ ಮತ್ತು ತರಬೇತಿಯ ಮೂಲಕ ಸಹಕಾರ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿಯುವ ಮೂಲಕ ಸಹಕಾರ ಸಂಘಗಳನ್ನು ಬಲಪಡಿಸಬೇಕಾಗಿದೆ. ಸಹಕಾರ ಇಲಾಖೆಯನ್ನು ಬಲಪಡಿಸಿ ಇಲಾಖೆಯ ಮೂಲಕ ಜನಸಾಮಾನ್ಯರಿಗೆ ಹಲವಾರು ಯೋಜನೆಗಳನ್ನು ನೀಡುವತ್ತ ನಮ್ಮನ್ನಾಳುವ ಸರಕಾರ ಮುಂದೆ ಬಂದಿದೆ, ಆದರೆ ರೈತರು ಇದರ ಪ್ರಯೋಜನವನ್ನು ಪಡೆಯುವಲ್ಲಿ ಉತ್ಸಾಹ ತೋರುತ್ತಿಲ್ಲ ಎಂದು ಜಿಲ್ಲಾ ಸಹಕಾರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಆರ್.ಎಸ್. ರೇಣುಕ ಹೇಳಿದರು.

ಇದೇ ಸಂದರ್ಭ ಹಿರಿಯ ಸಹಕಾರಿಗಳಾದ ಎನ್.ಸಿ. ಚನ್ನಬಸವಯ್ಯ, ಉಷಾ ಚಿನ್ನಪ್ಪ, ಡಿ.ವಿ. ಸದಾನಂದ, ಬಿ.ಆರ್. ಮರಿಯಪ್ಪ. ಡಿ.ಪಿ. ಸುಬ್ಬಯ್ಯ, ಬಿ.ಪಿ. ಕುಶಾಲಪ್ಪ, ಬಿ.ಎಸ್. ರಾಮಣ್ಣ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ. ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ನಳಿನಿ ಗಣೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪುರುಷೋತ್ತಮ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಎಸ್.ಪಿ. ಲಿಂಗಪ್ಪ, ನಿರ್ದೇಶಕರುಗಳಾದ ರಾಮಚಂದ್ರ, ರಮೇಶ್ ಚಂಗಪ್ಪ, ಪಿ.ಸಿ. ಅಚ್ಚಯ್ಯ, ಕನ್ನಡ ಸಂಪತ್, ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಸಹಕಾರ ಒಕ್ಕೂಟದ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು.