ಕುಶಾಲನಗರ, ಆ. 25: ಆರ್ಯವೈಶ್ಯ ಸಮುದಾಯ ಬಾಂಧವರು ಸಹಕಾರ ಕ್ಷೇತ್ರಗಳಲ್ಲಿ ಅತ್ಯುತ್ತಮವಾದ ಸಾಧನೆಗೈಯುವದರೊಂದಿಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವದು ಶ್ಲಾಘನೀಯ ವಿಚಾರ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.ಸ್ಥಳೀಯ ಸರಕಾರಿ ಆಸ್ಪತ್ರೆ ಬಳಿ ನಿರ್ಮಾಣವಾಗಿರುವ ಕುಶಾಲನಗರ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಆಂದೋಲನ ಆರಂಭದ ದಿನಗಳಲ್ಲಿ ಸಹಕಾರ ಕ್ಷೇತ್ರದ ಹೆಸರು ಕೇಳಿದರೆ ಮೂಗು ಮುರಿಯುತ್ತಿದ್ದ ಸನ್ನಿವೇಶಗಳು ಇದೀಗ ಬದಲಾವಣೆಗೊಂಡಿದೆ. ಸಹಕಾರ ಕ್ಷೇತ್ರಗಳ ಅದ್ಭುತವಾದ ಕಾರ್ಯಗಳು ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ರಾಜ್ಯದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ಆರ್ಯವೈಶ್ಯ ಜನಾಂಗ ಬಾಂಧವರು ಹೆಚ್ಚಾಗಿ ತಮ್ಮನ್ನು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಸೇವಾ ಕಾರ್ಯದಲ್ಲೂ ಕೂಡ ಕೈಜೋಡಿಸಿ ರುವದು ಶ್ಲಾಘನೀಯ ಎಂದರು.
ಆರ್ಯವೈಶ್ಯ ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಆರ್ಯವೈಶ್ಯ ಮಹಾಮಂಡಳಿ ಮೂಲಕ ವಾರ್ಷಿಕವಾಗಿ 1 ಕೋಟಿ ರೂಗಳಿಗೂ ಅಧಿಕ ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ ಎಂದ ಶಂಕರಮೂರ್ತಿ, ಸಮಾಜ ಬಾಂಧವರು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಹೊಂದಲು ಇದರ ಸದುಪಯೋಗ ಪಡೆಯಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ ಕಾರ್ಯಗಳ ಹಿಂದೆ ಶಂಕರಮೂರ್ತಿ ಅವರ ಪಯತ್ನ ಹಾಗೂ ಸಹಕಾರ ಪ್ರಮುಖವಾಗಿದೆ ಎಂದರು. ಅತಿ ಶೀಘ್ರದಲ್ಲಿ ರಾಜ್ಯಪಾಲರಾಗಿ ಉನ್ನತ ಪದವಿ ಅಲಂಕರಿಸಲಿರುವ ಶಂಕರಮೂರ್ತಿ ಅವರಿಗೆ ಈ ಸಂದರ್ಭ ಅಭಿನಂದನೆ ಸಲ್ಲಿಸಿದರು.
ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರವಿಕುಮಾರ್ ಪ್ರಾಸ್ತಾವಿಕ ನುಡಿಗಳಾಡಿ ಸಹಕಾರ ಸಂಘ ಬೆಳೆದು ಬಂದ ಹಾದಿಯ ಕುರಿತು ಮಾಹಿತಿ ನೀಡಿದರು.
ಸಹಕಾರ ಸಂಘಗಳ ಅಪರ ನಿಬಂಧಕ ಎ.ಸಿ.ದಿವಾಕರ್ ಮುಖ್ಯ ಭಾಷಣ ಮಾಡಿದರು. ಜಂಟಿ ನಿಬಂಧಕ ಎಸ್.ಎಚ್. ಸಂತೋಷ್ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್, ಸಹಾಯಕ ನಿಬಂಧಕ ಜೆ.ವಿಕ್ರಂ ರಾಜೇ ಅರಸ್, ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯೆ ರಶ್ಮಿ ಅಮೃತ್ರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಮಹಿಳಾ ಮಂಡಳಿ ಅಧ್ಯಕ್ಷೆ ಆಶಾ ಅಶೋಕ್, ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಆರ್.ಮಂಜುನಾಥ್, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಅಶ್ವಿನಿ ರವಿಕುಮಾರ್, ಸಹಕಾರ ಸಂಘದ ಕಾರ್ಯದರ್ಶಿ ಶಕುಂತಲಾ ಗೌರವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ದಾನಿಗಳಾದ ಪಿ.ಪಿ.ನಾಗೇಂದ್ರ ಶೆಟ್ಟಿ ಮತ್ತು ಪಿ.ಎನ್.ಅನಿಲ್ಕುಮಾರ್ ಕುಟುಂಬದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಬಿ.ಅಮೃತ್ರಾಜ್ ಸ್ವಾಗತಿಸಿದರು, ಬಾಲಾಜಿ ಮತ್ತು ಡಾ.ಬಿ.ಆರ್.ಶಾಂತಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.