ಮಡಿಕೇರಿ, ಸೆ. 6: ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸುತ್ತಿವೆ.

ಮಂಡ್ಯದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ಮಂಡ್ಯ ಮೂಲಕ ಬೆಂಗಳೂರಿಗೆ, ಬೆಂಗಳೂರಿನಿಂದ ಮಂಡ್ಯ ಮೂಲಕ ಕೊಡಗಿಗೆ ಸರ್ಕಾರಿ ಬಸ್‍ಗಳ ಸಂಚಾರ ಇಲ್ಲವಾಗಿದೆ. ಮಂಡ್ಯದಲ್ಲಿ ಸರ್ಕಾರಿ ಬಸ್‍ಗಳ ಸಂಚಾರಕ್ಕೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವಕಾಶವಾಗದ ಕಾರಣ ವಿಧಿಯಿಲ್ಲದೆ ಬದಲೀ ಮಾರ್ಗ ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಂತೆ ಕೊಡಗಿನಿಂದ ಬೆಂಗಳೂರಿನತ್ತ ತೆರಳುವ ಬಸ್‍ಗಳು ಚನ್ನರಾಯಪಟ್ಟಣ ಮಾರ್ಗವಾಗಿ ಕುಣಿಗಲ್ ಮೂಲಕ ತೆರಳುತ್ತಿವೆ. ಮೈಸೂರಿನಿಂದ ಕೊಡಗಿನತ್ತ ಬಸ್‍ಗಳು ಬರುತ್ತಿವೆ. ಆದರೆ ಮೈಸೂರಿನಿಂದ ಮುಂದಕ್ಕೆ ಬಸ್‍ಗಳ ಸಂಚಾರ ಕಷ್ಟ ಸಾಧ್ಯವಾಗಿದೆ. ಮೈಸೂರಿಗೆ ಎಂದಿನಂತೆ ಮಾಮೂಲಿಯಾಗಿ ಬಸ್‍ಗಳು ತೆರಳುತ್ತಿದ್ದು, ಬೆಂಗಳೂರಿಗೆ ಮಾತ್ರ ಬದಲಿ ಮಾರ್ಗವನ್ನು ಅವಲಂಭಿಸ ಲಾಗಿದೆ ಎಂದು ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ‘ಶಕ್ತಿ’ಗೆ ತಿಳಿಸಿದ್ದಾರೆ.