*ಗೋಣಿಕೊಪ್ಪಲು, ಡಿ. 20 : ಕೊಂಗಣ ಹೊಳೆ ಕೊಲ್ಲಿತೋಡು ಎಂಬಲ್ಲಿಂದ ಹುಣಸೂರು ತಾಲೂಕಿನತ್ತ ನೀರು ಹರಿಸುವ ಯೋಜನೆಯ ಸರ್ವೆ ಕಾರ್ಯಕ್ಕೆ ಶಾಸಕ ಕೆ.ಜಿ. ಬೋಪಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಸಕರ ಕಚೇರಿಯಲ್ಲಿ ಹುಣಸೂರು ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಸುರೇಶ್ ಶಾಸಕರನ್ನು ಭೇಟಿಯಾಗಿ ಸರ್ವೆ ಕಾರ್ಯಕ್ಕೆ ಅನುಮತಿ ಕೋರಿದಾಗ ವಿರೋಧ ವ್ಯಕ್ತಪಡಿಸಿದ್ದಾರೆ

ಸ್ಥಳೀಯ ಗ್ರಾಮ ಪಂಚಾಯ್ತಿ, ಶಾಸಕರು, ತಾ.ಪಂ. ಸದಸ್ಯರು, ಜಿ.ಪಂ. ಸದಸ್ಯರುಗಳ ಗಮನಕ್ಕೆ ತರದೆ ಯೋಜನೆಯನ್ನು ಕಾರ್ಯಗತಕ್ಕೆ ತರಲು ಸರ್ವೆ ಕಾರ್ಯಕ್ಕೆ ಮುಂದಾಗಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸುವದಾಗಿ ತಿಳಿಸಿದರು.

ಗ್ರಾಮಸ್ಥರ ನಿಲುವಿಗೆ ವಿರುದ್ಧವಾಗಿ ನಡೆಯುವ ಅಧಿಕಾರ ನನಗಿಲ್ಲ. ಅವರ ನಿರ್ಧಾರದ ಮೇಲೆ ಯೋಜನೆಯ ಅನುಷ್ಠಾನ ನಿಂತಿದೆ. ಸ್ಥಳೀಯ ಗ್ರಾ.ಪಂ. ಮತ್ತು ಗ್ರಾಮಸ್ಥರು ಇದಕ್ಕೆ ಅನುಮತಿ ನೀಡಿದರೆ ನನ್ನ ವಿರೋಧ ಇಲ್ಲ. ಆದರೆ ವೈಯಕ್ತಿಕವಾಗಿ ಯೋಜನೆಯನ್ನು ವಿರೋಧಿಸುತ್ತೇನೆ ಎಂದು ಅಧಿಕಾರಿಯೊಡನೆ ಮಾತುಕತೆಯ ಸಂದÀರ್ಭ ತಿಳಿಸಿದರು.

ಏನಿದು ಯೋಜನೆ? ಕೊಲ್ಲಿತೋಡುವಿನಿಂದ ನೀರನ್ನು ಲಕ್ಷ್ಮಣ ತೀರ್ಥ ನದಿಗೆ ತಿರುಗಿಸಿ ಹುಣಸೂರಿನತ್ತ ನೀರು ಹರಿಸುವದು ಯೋಜನೆಯ ಮೂಲ ಉದ್ದೇಶ. ಪೊನ್ನಂಪೇಟೆಯ ಸಿ.ಐ.ಟಿ ಕಾಲೇಜಿನಿಂದ 1 ಕಿ.ಮೀ ದೂರದ ಅರುವತ್ತೊಕ್ಲು ಗ್ರಾ.ಪಂ. ಸೇರಿರುವ ಕೊಲ್ಲಿತೋಡುವಿನಿಂದ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಬೇಗೂರು ಕೊಲ್ಲಿ ಮೂಲಕ ಲಕ್ಷ್ಮಣ ತೀರ್ಥ ನದಿಗೆ ನೀರನ್ನು ಸೇರಿಸುವ ಪ್ರಯತ್ನವಾಗಿದೆ. ಕೊಲ್ಲಿತೋಡು ನೀರು ಅರ್ಧ ಕೊಂಗಣ ಹೊಳೆಗೆ ಅರ್ಧ ಲಕ್ಷ್ಮಣತೀರ್ಥಕ್ಕೆ ಸೇರುತ್ತದೆ. ಕೇರಳಕ್ಕೆ ಹರಿದು ಹೋಗುತ್ತಿರುವ ಕೊಂಗಣ ಹೊಳೆ ನೀರನ್ನು ಕೊಲ್ಲಿತೋಡು ಹಳ್ಳದ ಮೂಲಕ ಲಕ್ಷ್ಮಣ ತೀರ್ಥಕ್ಕೆ ಸೇರಿಸುವದು ಯೋಜನೆಯಾಗಿದೆ.

ಈ ಸಂದರ್ಭ ಜಿ.ಪಂ. ಸದಸ್ಯ ಸಿ.ಕೆ.ಬೋಪಣ್ಣ, ಅಪ್ಪಡೇರಂಡ ಭವ್ಯ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ತಾ.ಪಂ. ಮಾಜಿ ಸದಸ್ಯ ರಾಜು, ತಾಲೂಕು ಫೆಡರೇಷನ್ ಉಪಾಧ್ಯಕ್ಷ ಮಲ್ಲಂಡ ಮಧು ಉಪಸ್ಥಿತರಿದ್ದರು.