ಮಡಿಕೇರಿ, ಆ. 25: ಮಡಿಕೇರಿ ತಾಲೂಕಿನ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿಗಳ ಸ್ಥಿತಿಗತಿಯ ಬಗ್ಗೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಸಭೆ ನಡೆಯಿತು. ಅನುಪಾಲನಾ ವರದಿಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬೊಮ್ಮೆಗೌಡ ಮಾತನಾಡಿ, ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಗ್ರಾಮೀಣ ಭಾಗದಲ್ಲಿಯೂ ತಮ್ಮ ಮಕ್ಕಳನ್ನು ಪೋಷಕರು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೇರ್ಪಡೆಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆಯ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಇದಕ್ಕೋಸ್ಕರ ಶಿಕ್ಷಕರಿಗೆ ಸ್ಪೋಕನ್ ಇಂಗ್ಲೀಷ್ ಕೋರ್ಸ್ ಆರಂಭಿಸುವ ಬಗ್ಗೆ ತಾಲೂಕಿನಲ್ಲಿ ಚಿಂತನೆ ನಡೆದಿದೆ. ಶಾಲೆಗಳ ಆರ್‍ಟಿಸಿ ಬದಲಾವಣೆ ಸಂಬಂಧ ಶಿಕ್ಷಣ ಸಂಯೋಜಕ ಚಂದ್ರಹಾಸ ಮಾಯಾಗೌಡ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸಲು ಕ್ರಮವ ವಹಿಸಲಾಗುವದು ಎಂದು ಹೇಳಿದರು.

ಅಧ್ಯಕ್ಷೆ ಶೋಭಾ ಮೋಹನ್ ಮಾತನಾಡಿ, ಪೇರೂರು ಶಾಲೆಯ ಶಿಕ್ಷಕಿಯೋರ್ವರು ಜನಪ್ರತಿನಿಧಿಗಳಿಗೆ ಅಗೌರವ ತೋರಿಸುವ ಮೂಲಕ ಬೇಜವಾಬ್ದಾರಿ ವರ್ತನೆ ತೋರು ತ್ತಿರುವ ಬಗ್ಗೆ ಗ್ರಾ.ಪಂ. ಅಧ್ಯಕ್ಷರು ತನ್ನ ಬಳಿ ದೂರಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರಿಶೀಲಿಸಿ ಕ್ರಮಕೈಗೊಳ್ಳುವದಾಗಿ ಸಭೆಗೆ ಭರವಸೆ ನೀಡಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಮಾತನಾಡಿ, ಗಾಳಿಬೀಡು ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದ ಶೇ. 100 ಫಲಿತಾಂಶ ಬರುತ್ತಿದೆ. ಆದರೆ ಶಾಲೆಯಲ್ಲಿ ಮೂಲಸೌಕರ್ಯದ ಕೊರತೆಯಿದೆ. 5-6 ಕಿಟಕಿಗಳೇ ಇಲ್ಲ. ತಕ್ಷಣ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗೆ ಸೂಚಿಸಿದರು. ಇನ್ನೋರ್ವ ಸದಸ್ಯ ಬಿ.ವೈ. ರವೀಂದ್ರ ಮಾತನಾಡಿ, ಬೋಯಿಕೇರಿ ಶಾಲೆಯ ಮೇಲ್ಛಾವಣಿ ಗೆದ್ದಲು ಹಿಡಿದು ಮರಮುಟ್ಟು ಮುರಿದು ನೀರು ಒಳಗಡೆ ಸೋರುತ್ತಿದೆ. ಅದನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.

ಜೊತೆಗೆ ಶಾಲೆಯ ಶಿಕ್ಷಕರು ಹಾಗೂ ಕೆಲವು ಎಸ್‍ಡಿಎಂಸಿ ಸದಸ್ಯರಲ್ಲಿ ಗುಂಪುಗಾರಿಕೆ ಯಿಂದಲೂ ಶಾಲೆಗಳಲ್ಲಿ ಸಮಸ್ಯೆ ತಲೆದೋರಿದೆ ಎಂದು ಬಹುತೇಕ ಸದಸ್ಯರು ಅಧಿಕಾರಿಯ ಗಮನಕ್ಕೆ ತಂದರು. ತುಂಬಾ ದುರಸ್ತಿ ಇರುವಂತಹ ಶಾಲೆಗಳ ಪಟ್ಟಿ ಮಾಡಲಾಗುತ್ತಿದೆ. ಬಳಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು. ಈ ಸಂದರ್ಭ ಅಧ್ಯಕ್ಷರು ಪ್ರತಿಕ್ರಿಯಿಸಿ ತಾ.ಪಂ. ಸದಸ್ಯರು, ಅಧಿಕಾರಿಗಳು, ಇಓ ಜೊತೆಗೆ ಪ್ರವಾಸ ಕೈಗೊಂಡು ಎಲ್ಲಾ ಶಾಲೆಗಳನ್ನು ಪರಿಶೀಲಿಸೋಣ ಎಂದು ಹೇಳಿದರು.

ಸದಸ್ಯೆ ಉಮಾಪ್ರಭು ಮಾತನಾಡಿ, ತನ್ನ ಕ್ಷೇತ್ರ ವ್ಯಾಪ್ತಿಯ ಅಂಗನವಾಡಿಯೊಂದಕ್ಕೆ ಪೊಲೀಸ್ ಅಧಿಕಾರಿಗಳು ಬರುವಂತಾಗಿದೆ. ಪುಟಾಣಿಗಳ ಎದುರಿನಲ್ಲಿಯೇ ಗಲಾಟೆಗಳಾಗುತ್ತಿವೆ. ಜನತೆ ನಮ್ಮನ್ನು ಪ್ರಶ್ನಿಸುವಂತಾಗಿದೆ. ಇದೀಗ ಆ ಕಾರ್ಯಕರ್ತೆ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭ ಸದಸ್ಯರಾದ ಶ್ರೀಧರ್, ರವೀಂದ್ರ ಹಾಗೂ ಇನ್ನಿತರರು ಹಲವು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ.

ತಿಂಗಳ 10-15 ದಿನಗಳು ಸಭೆ ಇದೆ ಹೇಳಿ ಕೇಂದ್ರಕ್ಕೆ ಬರುವದೇ ಇಲ್ಲ ಎಂದು ಹೇಳಿದರು. ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಅಂಗನವಾಡಿಗಳಿಗೆ ವಿತರಿಸುವ ಆಹಾರ ಚೆನ್ನಾಗಿಲ್ಲ ಎಂದು ಆರೋಪಿಸಿದರು. ಸಭೆಯ ಹೆಚ್ಚಿನ ಸಮಯ ಇಂದು ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಪರಿಸ್ಥಿತಿಯ ಬಗ್ಗೆಯೇ ಗಂಭೀರ ಚರ್ಚೆ ನಡೆಯಿತು. ಆದರೆ ಇದು ಪ್ರತೀ ಎಲ್ಲಾ ತಾ.ಪಂ. ಸಭೆಗಳಲ್ಲಿ ಕೇಳಿ ಬರುವ ಮಾಮೂಲಿ ಸಂಗತಿಯಾಗಿದೆ. ಆದರೆ ಪರಿಸ್ಥಿತಿ ಸುಧಾರಣೆಯಾಗುವದು ಮಾತ್ರ ಕಂಡು ಬರುತ್ತಿಲ್ಲ.

ಕಾರ್ಡ್ ಚಳುವಳಿ ಅಗತ್ಯ

ಪೈಸಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ 94 ಸಿ ಯಡಿ ಹಕ್ಕು ಪತ್ರ ವಿತರಣೆಯಾಗಬೇಕು. ಆದರೆ ಜಿಲ್ಲೆಯಲ್ಲಿ ಹಕ್ಕು ಪತ್ರ ವಿತರಣೆಗೆ ಕ್ರಮಕೈಗೊಂಡಿಲ್ಲ. ಹಕ್ಕು ಪತ್ರ ವಿತರಣೆಗೆ ಕ್ರಮಕೈಗೊಳ್ಳ ದಿರುವದರಿಂದ ಉಳುವವನಿಗೆ ಭೂಮಿ ಯೋಜನೆಯನ್ನು ರಾಜ್ಯದಲ್ಲಿ ಸಾಕಾರಗೊಳಿಸಿದ ದೇವರಾಜು ಅರಸು ಅವರ ಆತ್ಮಕ್ಕೆ ಶಾಂತಿ ಸಿಗಲಿಕ್ಕಿಲ್ಲ ಎಂದು ಸದಸ್ಯ ನಾಗೇಶ್ ಕುಂದಲ್ಪಾಡಿ ಮಾರ್ಮಿಕವಾಗಿ ನುಡಿದರು.

ಅರಸು ದಿನಾಚರಣೆ ಕಾಟಾಚಾರಕ್ಕೆ ನಡೆಯುತ್ತಿದೆ. 94 ಸಿ ಯಡಿ ಹಕ್ಕು ಪತ್ರ ವಿತರಣೆ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕಿನಲ್ಲಿ ಕಾರ್ಡ್ ಚಳುವಳಿ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಹಣವಿದ್ದವರದು ಮಾತ್ರ ಕಂದಾಯ ಇಲಾಖೆಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತದೆ. ಬಡವರ ಬಳಿ ಹಣವಿಲ್ಲದ ಕಾರಣ ಹಕ್ಕು ಪತ್ರ ವಿತರಣೆ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಬ್ರಿಟೀಷ್ ಆಡಳಿತದಲ್ಲಿದ್ದ ಸರ್ವಾಧಿಕಾರಿ ಧೋರಣೆಯನ್ನು ಕಂದಾಯ ಇಲಾಖೆ ಪ್ರದರ್ಶಿಸುತ್ತಿದೆ ಎಂದು ನಾಗೇಶ್ ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಮಾತನಾಡಿ, ಹಚ್ಚಿನಾಡಿ, ಹಮ್ಮಿಯಾಲ, ಮುಟ್ಲು ಗ್ರಾಮಗಳಲ್ಲಿ ವರ್ಷದ 6 ತಿಂಗಳು ವಿದ್ಯುತ್ ಇರುವದಿಲ್ಲ. ದುರಸ್ತಿ ಕಾರ್ಯಕ್ಕೆ ಹೊರಜಿಲ್ಲೆಯವರನ್ನು ಈ ಜಿಲ್ಲೆಯಲ್ಲಿ ನಿಯೋಜಿಸುವದು ಕಂಡು ಬರುತ್ತಿದೆ. ಆದರೆ ಅವರು ಮಳೆಗಾಲದಲ್ಲಿ ಜಿಗಣೆ ಕಾಟಾದಿಂದಾಗಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುವದು ಕಂಡು ಬಂದಿದೆ. ಆಗಾಗಿ ಜಿಲ್ಲೆಯವರನ್ನೇ ಲೈನ್‍ಮೆನ್‍ಗಳಾಗಿ ನಿಯೋಜಿಸಲು ಕ್ರಮಕೈಗೊಳ್ಳುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನಲ್ಲಿ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. 6500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಕೃಷಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಾಂತ್ರಿಕ ವಿಧಾನದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಶೇ. 50ರಷ್ಟು ರಿಯಾಯಿತಿ ದರದಲ್ಲಿ ತಾಂತ್ರಿಕ ಉಪಕರಣಗಳನ್ನು ನೀಡುವ ಯೋಜನೆಯಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಲು ಸದಸ್ಯರ ಸಹಕಾರ ಅಗತ್ಯ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಸಂತು ಸುಬ್ರಮಣಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಟಿ.ಎನ್. ಜೀವನ್ ಕುಮಾರ್, ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಇದ್ದರು.