ಮಡಿಕೇರಿ, ಡಿ. 22 : ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ಕಾಯ್ದಿರಿಸುವದರ ಜೊತೆಗೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸುವ ಕಾರ್ಯವು ಪ್ರಥಮ ಆದ್ಯತೆಯಲ್ಲಿ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿನ ಮೂಲ ನಿವಾಸಿ ಗಿರಿಜನರು, ಪರಿಶಿಷ್ಟರು, ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸುವದು ಒಂದು ಕಡೆಯಾದರೆ, ಮುಂದಿನ 50 ವರ್ಷಗಳಿಗೆ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಭೂಮಿ ಅತ್ಯಗತ್ಯವಾಗಿ ಬೇಕಿದೆ. ಆದ್ದರಿಂದ ಈಗಿನಿಂದಲಾದರೂ ಮುಂದಾ ಲೋಚನೆ ಮಾಡಿ ಸರ್ಕಾರಿ ಭೂಮಿಯನ್ನು ಗುರುತಿಸು ವಂತಾಗಬೇಕು. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಕೂಡಲೇ ತೆರವುಗೊಳಿಸಲು ಮುಂದಾಗಬೇಕಿದೆ ಎಂದು ನಿರ್ದೇಶನ ನೀಡಿದರು.
ಬುಡಕಟ್ಟು ಕುಟುಂಬಗಳು, ನಿರ್ಗತಿಕರು ಹಾಗೂ ಪರಿಶಿಷ್ಟರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸುವದು ಆಯಾಯ ಗ್ರಾಮ ಪಂಚಾಯಿತಿಗಳ ಜವಾಬ್ದಾರಿಯಾಗಿದೆ. ಆದರೆ
(ಮೊದಲ ಪುಟದಿಂದ) ಆ ಕೆಲಸವನ್ನು ಗ್ರಾ.ಪಂ.ಗಳು ಮಾಡುತ್ತಿಲ್ಲ. ಬರೀ ಐಟಿಡಿಪಿ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ನಿವೇಶನ ಇದ್ದರೆ ತಾನೇ ವಸತಿ ಕಲ್ಪಿಸಲು ಸಾಧ್ಯ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಆಯಾಯ ಗ್ರಾ.ಪಂ.ಗಳಲ್ಲಿ ಗ್ರಾಮ ಸಭೆಗಳನ್ನು ಮಾಡಿ ತಮ್ಮ ವ್ಯಾಪ್ತಿಯಲ್ಲಿನ ಬುಡಕಟ್ಟು ಹಾಗೂ ಪರಿಶಿಷ್ಟರನ್ನು ಗುರುತಿಸಿ ನಿವೇಶನ ರಹಿತರಿಗೆ, ವಸತಿ ರಹಿತರಿಗೆ ಗ್ರಾಮ ಸಭೆಯಲ್ಲಿ ಪಟ್ಟಿ ಮಾಡಿ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಬೇಕಿದೆ. ಈ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ತಾ.ಪಂ. ಇಒಗಳಿಗೆ ಸೂಚನೆ ನೀಡಿದರು.
ಇದುವರೆಗೆ ಗುರುತಿಸಿ ಕಾಯ್ದಿರಿಸಲಾಗಿರುವ ಭೂಮಿಯನ್ನು ಸಂರಕ್ಷಣೆ ಮಾಡಿಕೊಳ್ಳಲು ಸಹ ಗ್ರಾ.ಪಂ. ಹಾಗೂ ತಾ.ಪಂ.ಗಳು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ 50-53 ರಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಸಂಬಂಧಿಸಿದಂತೆ ತಾ. 31 ರೊಳಗೆ ವಿಲೇವಾರಿ ಮಾಡಬೇಕಿದೆ. ಈ ಬಗ್ಗೆ ಕಂದಾಯ ಸಚಿವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಸಭೆ ನಡೆಸಿ ತ್ವರಿತವಾಗಿ ಅರ್ಜಿಗಳ ವಿಲೇವಾರಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಎದುರಿಸುವಂತೆ ತಹಶೀಲ್ದಾರ್ಗಳಿಗೆ ಎಚ್ಚರಿಕೆ ನೀಡಿದರು.
ಅಕ್ರಮ ಸಕ್ರಮ ಯೋಜನೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಸಂಬಂಧ ಪ್ರತಿ ಶನಿವಾರ ಸಭೆ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ ಎಷ್ಟು ಸಭೆಗಳು ಆಗಿವೆ. ಮಾಹಿತಿ ಒದಗಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಈಗಾಗಲೇ ತಾ.ಪಂ.ಗೆ ನೀಡಲಾಗಿರುವ ಜಾಗವನ್ನು ಅಭಿವೃದ್ಧಿ ಪಡಿಸಬೇಕು. ಅತಿಕ್ರಮವಾಗಿದ್ದಲ್ಲಿ ಒಂದು ತಿಂಗಳೊಳಗೆ ತೆರವುಗೊಳಿಸುವಂತೆ ತಾ.ಪಂ.ಇಒಗಳಿಗೆ ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಈಗಾಗಲೇ ಕಂದಾಯ ಇಲಾಖೆಯಿಂದ ಸರ್ಕಾರಿ ಭೂಮಿಯನ್ನು ಗುರುತಿಸಿ ತಾ.ಪಂ.ಗೆ ಭೂಮಿಯನ್ನು ನೀಡಿದರೂ ಸಹ ಅದನ್ನು ಸಂರಕ್ಷಣೆ ಮಾಡಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ತಹಶೀಲ್ದಾರರು ಮತ್ತು ತಾ.ಪಂ.ಇಒಗಳು ಹಾಗೆಯೇ ತಹಶೀಲ್ದಾರರು ಮತ್ತು ಸರ್ವೆ ಅಧಿಕಾರಿಗಳು ಕೊಂಡಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಿವೇಶನ ರಹಿತ ಕುಟುಂಬಗಳ ನಿಖರ ಮಾಹಿತಿಯನ್ನು ಒದಗಿಸಬೇಕು. ಈಗಾಗಲೇ ಒದಗಿಸಲಾಗಿರುವ ಭೂಮಿಯನ್ನು ಸಂರಕ್ಷಣೆ ಮಾಡಿಕೊಳ್ಳುವದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಅವರು ಈಗಾಗಲೇ ಹಲವು ಕಡೆಗಳಲ್ಲಿ ಭೂಮಿ ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ತಹಶೀಲ್ದಾರ್ ಕುಸುಮ, ಮಹದೇವಸ್ವಾಮಿ, ಕೃಷ್ಣ ಅವರು ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿಗಳ ವಿಲೇವಾರಿ ಮತ್ತಿತರ ಸಂಬಂಧ ಹಲವು ಮಾಹಿತಿ ನೀಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಡ್ನೇಕರ್, ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಷಂಶುದ್ದೀನ್ ಇತರರು ಹಲವು ಮಾಹಿತಿ ನೀಡಿದರು. ಕಂದಾಯ ನಿರೀಕ್ಷಕರು ಇತರರು ಇದ್ದರು.