ಮಡಿಕೇರಿ, ಡಿ. 24: ಸರ್ಕಾರಿ ಜಾಗವನ್ನು ಅಕ್ರಮವಾಗಿ ಮಂಜೂರಾತಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಕಾವೇರಿ ಸೇನೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಕೋಟೆಕಾಡು ಮಕ್ಕಂದೂರು ಗ್ರಾಮದ ಸರ್ವೆ ನಂ. 196ರಲ್ಲಿ ಮಹಿಳೆಯೊಬ್ಬರ ಹೆಸರಿನಲ್ಲಿ ಹಳೆಯ ಜಮಾಬಂದಿ ಮೊಣಕಾಲು ಮುರಿಯಿಂದ ವಿಂಗಡಿಸಿದ ಪೈಸಾರಿ ಎಂದಿದ್ದು, ತಹಶೀಲ್ದಾರ್ ಕಚೇರಿಯಲ್ಲಿಯೂ ಸರ್ವೇ ನಂ. 196ರಲ್ಲಿರುವ 12.84 ಎಕರೆ ಜಾಗವು ಮೊಣಕಾಲು ಮುರಿಯಿಂದ ವಿಂಗಡಿಸಿದ ಪೈಸಾರಿ ಎಂಬದಾಗಿ ರುತ್ತದೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ (ಎ.ಡಿ.ಎಲ್.ಆರ್.) 1958 -1979 ರವರೆಗೆ ಇರುವ ಜಮಾಬಂದಿಯಲ್ಲಿ ಮಡಿಕೇರಿ ಯಲ್ಲಿರುವ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಸರ್ವೇ ನಂ. 196 ರಲ್ಲಿ 12.84 ಎಕರೆ ಜಾಗವು ಮೊಣಕಾಲುಮುರಿಯಿಂದ ವಿಂಗಡಿಸಿದ ಪೈಸಾರಿ ಎಂಬದಾಗಿ ನಮೂದಿಸಲ್ಪಟ್ಟಿರುತ್ತದೆ. ನಂತರ 2016-17ರ ಆಕಾರಬಂದಿಯಲ್ಲಿ ಸರ್ವೆ ನಂ. 196ರ ಜಾಗವು ಪ್ಲಾಂಟೇಷನ್ ಎಂಬದಾಗಿ ನಮೂದಿಸಲ್ಪಟ್ಟಿರುತ್ತದೆ. ಇದನ್ನು ಪರಿಶೀಲಿಸಿದಾಗ ಕಂದಾಯ ಇಲಾಖೆಯಲ್ಲಿ ಅಕ್ರಮ ನಡೆದಿರುವದು ಕಂಡು ಬರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಯ ಕಚೇರಿಯ ಜಮಾಬಂದಿ, ತಹಶೀಲ್ದಾರ್ ಕಚೇರಿಯಲ್ಲಿರುವ ಜಮಾಬಂದಿ, 2000 ಇಸವಿಯ ಜಮಾಬಂದಿ, 2016-17ರ ಆಕಾರ ಬಂದಿ ಇವುಗಳನ್ನು ಪರಿಶೀಲಿಸಿ ಅಕ್ರಮವನ್ನು ಬಯಲಿಗೆಳೆದು ಸರಕಾರಿ ಜಾಗವನ್ನು ಅಕ್ರಮವಾಗಿ ಮಂಜೂರಾತಿ ಮಾಡಿಕೊಂಡಿ ರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾವೇರಿ ಸೇನೆ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭ ಕಾವೇರಿ ಸೇನೆಯ ಸೋಮವಾರಪೇಟೆ ತಾಲೂಕು ಸಂಚಾಲಕ ಹೊಸಬೀಡು ಶಶಿ, ಕೆ. ನಿಡುಗಣೆ ಗ್ರಾ.ಪಂ. ಸದಸ್ಯೆ ದೇವಕ್ಕಿ, ಗ್ರಾಮಸ್ಥರಾದ ಪ್ರಕಾಶ್, ಎನ್.ಎ. ಕಮಲ, ಕೆ.ಪಿ. ಅಣ್ಣಿ, ಕೆ.ಪಿ. ಸುರೇಶ್, ನಾಣಯ್ಯ, ಕಿಟ್ಟು ಬಸಪ್ಪ, ಶೇಷಪ್ಪ ಹಾಗೂ ಇನ್ನಿತರರು ಇದ್ದರು.