ಮಡಿಕೇರಿ, ನ. 10: ಕಾನೂನಿನ ಜ್ಞಾನವಿಲ್ಲವೆಂದು ತಪ್ಪು ಮಾಡಿದರೆ, ಕಾನೂನು ಒಪ್ಪುವದಿಲ್ಲ. ಸ್ವಲ್ಪಮಟ್ಟಿಗಾದರೂ ಕಾನೂನಿನ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ತಿಳಿಸಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರದಿಂದ ಪ್ರತಿ ದಿನ ಜನತಾ ನ್ಯಾಯಾಲಯ ನಡೆಯಲಿದ್ದು, ಬಾಕಿ ಇರುವ ಪ್ರಕರಣಗಳನ್ನು ಉಚಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ರಾಜಿ ಸೂತ್ರದ ಮೂಲಕ ಅಥವಾ ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳ ಬಹುದಾಗಿದೆ ಎಂದು ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ, ಕಾನೂನನ್ನು ಪಾಲಿಸಿದಾಗ ಉತ್ತಮ ಸಮಾಜವನ್ನು ಕಾಣಲು ಸಾಧ್ಯ. ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು. ಸಾರ್ವಜನಿಕರ ಸ್ವತ್ತುಗಳ ರಕ್ಷಣೆ ಮಾಡಬೇಕು. ಕರ್ತವ್ಯ ಪ್ರಜ್ಞೆ ತೋರಿಸಬೇಕು ಎಂದು ಸಲಹೆ ಮಾಡಿದರು.

14 ವರ್ಷದವರೆಗೆ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು. 18 ವರ್ಷದೊಳಗಿನ ಮಕ್ಕಳೊಂದಿಗೆ ಯಾವದೇ ರೀತಿಯ ಒಪ್ಪಂದ ಮಾಡಿಕೊಂಡರೆ ಸಿಂಧುವಾಗುವದಿಲ್ಲ ಎಂದು ತಿಳಿಸಿದರು.

ವಕೀಲೆ ಕೆ.ಎಂ. ಮೀನಾಕುಮಾರಿ ಅವರು ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗಾಗಿ ಕಾನೂನು ಎಂಬ ಬಗ್ಗೆ ಮಾಹಿತಿ ನೀಡಿದರು. ಕೌಟುಂಬಿಕ ದೌರ್ಜನ್ಯ ಗಳು ಹೆಚ್ಚಾಗುತ್ತಿದೆ. ಇವುಗಳು ಕಡಿಮೆ ಯಾಗಬೇಕು ದೇಶದ ಕಾನೂನನ್ನು ಗೌರವಿಸಬೇಕು ಎಂದು ಹೇಳಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಯೋಗೇಶ್ ಕುಮಾರ್ ಮಾತನಾಡಿದರು. ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಜಯಪ್ಪ ನಿರೂಪಿಸಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಇಂದ್ರೇಶ್ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.