ಮಡಿಕೇರಿ, ಜ.3 ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ತಾ. 6 ಮತ್ತು 7 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ರವಿ ಎರಡು ದಿನಗಳ ಕಾಲ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ತಾ. 6 ರಂದು ಶಾಸಕರಾದಿಯಾಗಿ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಗುವದು. ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಅಥ್ಲೇಟಿಕ್ಸ್, ವಾಲಿಬಾಲ್, ಫುಟ್‍ಬಾಲ್, ಕಬಡ್ಡಿ, ಕ್ರಿಕೆಟ್, ಚೆಸ್, ಷಟಲ್ ಬ್ಯಾಡ್ಮಿಂಟನ್, ಹಾಕಿ, ಬಾಸ್ಕೆಟ್ ಬಾಲ್, ಈಜು, ಟೆನ್ನಿಸ್, ಸಿಂಗಲ್ಸ್-ಡಬಲ್ಸ್ ಕೇರಂ, ಗುಂಡು ಎಸೆತ, ಡಿಸ್ಕಸ್ ಎಸೆತ, ಥ್ರೋಬಾಲ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹಿಂದೂಸ್ಥಾನಿ ಸಂಗೀತದಲ್ಲಿ ಮೌಖಿಕ ಮತ್ತು ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಲಘು ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯದಲ್ಲಿ ಕಥಕ್, ಒಡಿಸ್ಸಿ, ಕಥಕಳಿ, ಕುಚುಪುಡಿ, ಮಣಿಪುರಿ, ಜಾನಪದ ನೃತ್ಯ, ವೈಯಕ್ತಿಕ ಹಾಗೂ ತಂಡದ ಮೂಲಕ ಜಾನಪದ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ, ಹಿಂದೂಸ್ಥಾನಿ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ, ಕಿರುನಾಟಕ, ಪರಕೇಶನ್ ವಾದ್ಯಗಳು ಜನರಲ್, ಸ್ಪ್ರಿಂಗ್ ವಾದ್ಯ ಸೇರಿದಂತೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಕೆ.ಬಿ.ರವಿ ತಿಳಿಸಿದರು.

ರಾಜ್ಯ ಸರಕಾರದ ಖಾಯಂ ನೌಕರರು, ಜಿ.ಪಂ. ಗ್ರಾ.ಪಂ. ಮತ್ತು ಇತರ ಸ್ವಾಯತ್ತ ಸಂಸ್ಥೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ನೌಕರರು ಈ ಕ್ರೀಡಾ ಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ಅನ್ಯ ಕಾರ್ಯ ನಿಮಿತ್ತ ಓಓಡಿ ನೀಡಲಾಗುತ್ತದೆ ಎಂದು ತಿಳಿಸಿದ ರವಿ, ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ತಾ. 20 ರಿಂದ 22 ರವರೆಗೆ ಶಿವಮೊಗ್ಗದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು. ಹೆಚ್ಚಿನ ವಿವರಗಳಿಗೆ ಸಂಘದ ಕಚೇರಿ ಸಂಖ್ಯೆ 08272 228985 ನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಪಿ.ಡಿ. ರಾಜೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಟಿ. ಮುತ್ತಣ್ಣ ಹಾಗೂ ಉಪಾಧ್ಯಕ್ಷ ಅಯ್ಯಣ್ಣ ಉಪಸ್ಥಿತರಿದ್ದರು.