ಸೋಮವಾರಪೇಟೆ, ಅ. 9: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಸುತ್ತಮುತ್ತ ಇರುವ ಸರ್ಕಾರಿ ಜಾಗ ಒತ್ತುವರಿಯಾಗುತ್ತಿದ್ದು, ಒತ್ತುವರಿ ಜಾಗ ತೆರವಿಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಬೆಂಬಳೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಪಟೇಲ್ ಒತ್ತಾಯಿಸಿದ್ದಾರೆ.

ಕೆಲವರು ಮನ ಬಂದಂತೆ ಒತ್ತುವರಿ ಮಾಡಿದ್ದು, ಇದನ್ನು ಪ್ರಶ್ನಿಸಿದವರ ಮೇಲೆ ದೂರು ದಾಖಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿಯೇ ಒಡಕು ಉಂಟಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಬಳೂರು ವಾರ್ಡ್ ವ್ಯಾಪ್ತಿಗೆ ಸೇರಿದ ಕಣಾರಳ್ಳಿ ಗ್ರಾಮದ ಸರ್ವೆ ನಂ. 33/1ರ ಸುಮಾರು 4.5 ಎಕರೆ ಪೈಸಾರಿ ಜಾಗದಲ್ಲಿ 50 ಗುಡಿಸಲುಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಇತ್ತೀಚೆಗೆ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಗುಡಿಸಲುಗಳನ್ನು ತೆರವುಗೊಳಿಸಲಾಗುವದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದುವರಗೆ ತೆರವು ಕಾರ್ಯ ನಡೆದಿಲ್ಲ ಎಂದು ಹೇಳಿದರು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ನವಗ್ರಾಮ ನಿರ್ಮಾಣಕ್ಕೆ ಕ್ಯಾತೆ ಹಾಗೂ ಹಾರೋಹಳ್ಳಿ ಗ್ರಾಮದಲ್ಲಿ ತಲಾ 4 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಕೂಡಲೇ ಪಂಚಾಯಿತಿಯವರು ಕಾರ್ಯೋನ್ಮುಖರಾಗಿ ಆ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಒತ್ತಾಯಿಸಿದರು. ಬೆಂಬಳೂರು ಗ್ರಾಮದ ಸರ್ವೆ ನಂಬರ್ 307/8, 307/9ರ ಬಾಣತಮ್ಮ ದೇವರ ಬನದ ಜಾಗ ಮತ್ತು ಕುಮಾರಲಿಂಗೇಶ್ವರ ಜಾತ್ರಾ ಮೈದಾನದ ಜಾಗವನ್ನು ಅತಿಕ್ರಮಣ ಮಾಡಲಾಗಿದೆ ಎಂದು ದೂರಿದರು. ತಕ್ಷಣವೇ ಕೊಡ್ಲಿಪೇಟೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಒತ್ತುವರಿ ಜಾಗವನ್ನು ಕಂದಾಯ ಇಲಾಖೆ ತೆರವುಗೊಳಿಸದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ಶಿವರಳ್ಳಿ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಮೇದಪ್ಪ, ಕಣಾರಳ್ಳಿ ಗ್ರಾಮದ ಪುಟ್ಟರಂಗಯ್ಯ ಉಪಸ್ಥಿತರಿದ್ದರು.