ವೀರಾಜಪೇಟೆ, ಜ. 27: ಸರ್ಕಾರದಿಂದ ದೊರಕುವ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಭವಿಷ್ಯದ ಕಡೆಗೆ ಪೋಷಕರುಗಳು ಗಮನಹರಿಸ ಬೇಕಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.ವೀರಾಜಪೇಟೆ ಸಮೀಪದ ಪೆರುಂಬಾಡಿ ಗ್ರಾಮದಲ್ಲಿ ನಬಾರ್ಡ್ ಅನುದಾನದಡಿ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ರೂ. 7.79 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಾಲೂಕಿನಲ್ಲೇ ಮೊದಲ ಬಾರಿಗೆ ಎಲ್ಲಾ ಸೌಲಭ್ಯಗಳು ಹೊಂದಿರುವಂತ ಅಂಗನವಾಡಿ ಕೇಂದ್ರವಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಂಡು, ಸಹಕಾರ ನೀಡಿ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಾಗಿದೆ ಎಂದರು.
ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಇದೇ ಮೊದಲ ಬಾರಿ ಹೈಟೆಕ್ ಮಾದರಿಯ ಅಂಗನವಾಡಿ ಕೇಂದ್ರವನ್ನು ಮಾಡಲಾಗಿದ್ದು, ಬಡ ಮಕ್ಕಳು ಇದರ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತರಾಗಬೇಕು. ಅನೇಕರು ಕನ್ನಡ ಶಾಲೆಯಲ್ಲೇ ವಿದ್ಯಾಭ್ಯಾಸ ಕಲಿತವರು ಉನ್ನತ ಹುದ್ದೆಯಲ್ಲಿದ್ದಾರೆ. ಇಲ್ಲಿ ಮೇಲು-ಕೀಳು ಎಂಬ ಭಾವನೆ ಇಲ್ಲದೆ ಸರ್ಕಾರ ನೀಡಿರುವದನ್ನು ಸರಿಯಾಗಿ ಬಳಸಿಕೊಳ್ಳುವಂತಾಗಬೇಕು ಎಂದರು. ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಎ.ಪಿ. ಲೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಇದೇ ರೀತಿ ಇನ್ನು ಅನೇಕ ಕಟ್ಟಡಗಳನ್ನು ಮಾಡುವ ಯೋಜನೆ ಸರ್ಕಾರದ್ದಾಗಿದೆ. ಮಕ್ಕಳಿಗೆ ನೀಡುವ ಆಹಾರ ಎಲ್ಲಾ ಸೌಲತ್ತುಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ಗ್ರಾ.ಪಂ. ಸದಸ್ಯರಾದ ಉದಯ, ಶ್ರಿಜಾ ಜಯನ್, ಕಟ್ಟಡಕ್ಕೆ ಜಾಗ ನೀಡಿದ ಹೆಚ್.ಯು. ನಿತಾ, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಪಿ. ರಘು ನಾಣಯ್ಯ, ಕೊ. ಫೆಡರೇಶನ್ ಮಾರ್ಕೆಟಿಂಗ್‍ನ ಉಪಾಧ್ಯಕ್ಷ ಎಂ. ಮದು ದೇವಯ್ಯ, ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಜೋಕಿಂ ರಾಡ್ರೀಗಸ್, ಅಂಗನವಾಡಿ ಕಾರ್ಯಕರ್ತೆ ಅನುಸೂಯ, ಗುತ್ತಿಗೆದಾರ ರಾಮಚಂದ್ರ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಜಿ ಗ್ರಾ.ಪಂ. ಅಧ್ಯಕ್ಷೆ ಹೆಚ್.ಎಂ. ಗಾಯತ್ರಿ ವಹಿಸಿದ್ದರು. ಎಂ.ಹೆಚ್. ನಾಸರ್ ಅಂಗನವಾಡಿ ಮಕ್ಕಳಿಗಾಗಿ ಕುಕ್ಕರ್ ನೀಡಿದರು. ಈ ಸಂದರ್ಭ ಗ್ರಾಮಸ್ಥರು ಭಾಗವಹಿಸಿದ್ದರು.