ಕುಶಾಲನಗರ, ಜು. 16: ರಾಜ್ಯ ಸರಕಾರದಿಂದ ಕಾನೂನಿನ ಕಗ್ಗೊಲೆ ನಡೆಯುತ್ತಿದೆ. ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಅವರನ್ನು ಬಚಾವ್ ಮಾಡುವ ಸಲುವಾಗಿ ರಾಜ್ಯ ಸರಕಾರ ಪ್ರಕರಣವನ್ನೇ ಮುಚ್ಚಿಹಾಕುವ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಅವರು ರಂಗಸಮುದ್ರದಲ್ಲಿ ಗಣಪತಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಧ್ಯಮಗಳ ಮುಖಾಂತರ ಗಣಪತಿ ಅವರು ತನಗೆ ಕಿರುಕುಳ ಕೊಡುತ್ತಿದ್ದವರ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಮುನ್ನ ನೀಡುವ ಹೇಳಿಕೆ ಸಾಕ್ಷಿ ಮಾನ್ಯ ಮಾಡಬಹುದೆಂದು ಉಚ್ಚ ನ್ಯಾಯಾಲಯ ಕೂಡ ಸ್ಪಷ್ಟಪಡಿಸಿದೆ. ಆದರೆ ರಾಜ್ಯದ ಮುಖ್ಯಮಂತ್ರಿ

ಮತ್ತು ಗೃಹಮಂತ್ರಿಗಳು ಸರಕಾರ ಗಣಪತಿ ಅವರ ಆತ್ಮಹತ್ಯೆಗೆ

ಜಾರ್ಜ್ ಕಾರಣರಲ್ಲ ಎಂದು

ತನಿಖೆಗೆ ಮೊದಲೇ ಹೇಳಿಕೆ ನೀಡುವದರೊಂದಿಗೆ ಆರೋಪಿಗಳಿಗೆ ಅಭಯಹಸ್ತ ನೀಡಿರುವದು ದುರಂತ. ಟಿಪ್ಪು ಗಲಭೆ ಸಂದರ್ಭ ಕುಟ್ಟಪ್ಪ ಅವರ ಸಾವಿನ ಕುರಿತಾಗಿಯೂ ಇದೇ ರೀತಿ ತಪ್ಪು ಕಲ್ಪನೆ ಮೂಡಿಸಿದ್ದು ಇದುವರೆಗೆ ತನಿಖೆಯ ವಿವರವನ್ನು ಬಹಿರಂಗಪಡಿಸಿಲ್ಲ. ಗಣಪತಿ ಅವರ ಆತ್ಮಹತ್ಯೆ ಕುರಿತಾಗಿ ಪತ್ನಿ ಪಾವನ ನೀಡಿದ ದೂರನ್ನು ಸ್ವೀಕರಿಸದೆ ಕುಟುಂಬ ಕಲಹ ಮತ್ತು ಗಣಪತಿ ಅವರ ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಕಾರಣ ಎಂದು ತಪ್ಪು ಮಾಹಿತಿ ನೀಡುವ ಮೂಲಕ ರಾಜ್ಯ ಸರಕಾರ ಪ್ರಕರಣದ ಹಾದಿ ತಪ್ಪಿಸುತ್ತಿದೆ. ಪ್ರಕರಣ ಸಂಬಂಧ ಧಾರ್ಮಿಕ ಭಾವನೆ ಬಿತ್ತುವ ಮೂಲಕ ಕೂಡ ಜಾರ್ಜ್ ರಕ್ಷಣೆಗೆ ಸಿದ್ದರಾಮಯ್ಯ ನಿಂತಿದ್ದಾರೆ ಎಂದು ಆರೋಪಿಸಿದರು. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಅವರ ಕುಟುಂಬ ಹಾಗೂ ರಾಜ್ಯದ ಜನತೆಯ ಧ್ವನಿಯಾಗಿ ಭಾರತೀಯ ಜನತಾ ಪಕ್ಷ ವಿಧಾನಮಂಡಲ ಒಳಗೆ ಹಾಗೂ ಹೊರಗೆ ಹೋರಾಟ ನಡೆಸುತ್ತಿದೆ. ಸದನ ಮುಗಿದ ಬಳಿಕ ಗಣಪತಿ ಆತ್ಮಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗಿಸುವ ಮೂಲಕ ನ್ಯಾಯ ಒದಗಿಸಲು ರಾಜ್ಯಾದ್ಯಂತ ಹೋರಾಟ ಗಳನ್ನು ಕೈಗೊಳ್ಳಲಾಗುವದು ಎಂದರು.

ಈ ಸಂದರ್ಭ ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನೀಲ್ ಸುಬ್ರಮಣಿ ಗಣೇಶ್ ಕಾರ್ನಿಕ್, ಭಾನುಪ್ರಕಾಶ್, ಸೋಮಣ್ಣ ಬೇವಿನಮರದ ಮತ್ತಿತರರು ಇದ್ದರು.