ಮಡಿಕೇರಿ, ಜ. 5: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವತಿಯಿಂದ ಮಹಾರಾಷ್ಟ್ರದ ಬಾರಾಮತಿ ನಗರದಲ್ಲಿ ವಿದ್ಯಾ ಪ್ರತಿಷ್ಠಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ 24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕೊಡಗು ಜಿಲ್ಲೆಯಿಂದ 3 ಮಂದಿ ಕಿರಿಯ ವಿಜ್ಞಾನಿಗಳು ಭಾಗವಹಿಸಿದ್ದರು.

‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’ ಎಂಬ ಕೇಂದ್ರ ವಿಷಯ ಕುರಿತಂತೆ ಜರುಗಿದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹರ್ಷ ಪೊನ್ನಪ್ಪ ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು, ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಸಹನಾ ರುಕಿಯಾ ಇಂಗಾಲದ ಹೆಜ್ಜೆ ಗುರುತುಗಳ ಕುರಿತು ಹಾಗೂ ಸಂತ ಜೋಸೆಫರ ಪ್ರೌಢಶಾಲೆಯ ಕೆ.ಎಂ.ತಂಗಮ್ಮ ಹಳೆಯ ಸಾಂಪ್ರದಾಯಿಕ ಜ್ಞಾನ ಪದ್ಧತಿ ಕುರಿತು ತಮ್ಮ ತಂಡದೊಂದಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ರೂಪಿಸಿದ್ದ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದಾರೆ.

ಈ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗಿನ 3 ಮಂದಿ ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕ ರಾಜ್ಯದಿಂದ 30 ಮಂದಿ ಕಿರಿಯ ವಿಜ್ಞಾನಿಗಳು ಹಾಗೂ 8 ಮಂದಿ ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು.

ಸಮಾವೇಶದ ರಾಜ್ಯ ಸಂಯೋಜಕರೂ ಆದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಸಮಾವೇಶದಲ್ಲಿ ರಾಜ್ಯದ ಕಿರಿಯ ವಿಜ್ಞಾನಿಗಳು ಹಾಗೂ ಮಾರ್ಗದರ್ಶಿ ಶಿಕ್ಷಕರ ತಂಡದ ನೇತೃತ್ವವನ್ನು ವಹಿಸಿದ್ದರು.

ಈ ತಂಡದೊಂದಿಗೆ ಮಾರ್ಗದರ್ಶಿ ಶಿಕ್ಷಕಿಯರಾದ ಕೊಡಗು ವಿದ್ಯಾಲಯದ ಶಿಕ್ಷಕಿ ಕೋಟೆರ ಮೀರಾ ಹಾಗೂ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಶಿಕ್ಷಕಿ ಬಿ.ಜಿ. ನೃತ್ಯ ಸಮಾವೇಶಕ್ಕೆ ತೆರಳಿದ್ದರು.

ಸಮಾವೇಶದಲ್ಲಿ ಸಮಾವೇಶದ ಕೇಂದ್ರ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಉಪ ವಿಷಯದಡಿ ವಿದ್ಯಾರ್ಥಿಗಳು ಗುಂಪು ಅಧ್ಯಯನ ಕೈಗೊಂಡು ಸಮೀಕ್ಷೆ ನಡೆಸಿ, ವಿಶ್ಲೇಷಿಸುವ ಮೂಲಕ ಸ್ಥಳೀಯ ಪರಿಸರದ ಸಮಸ್ಯೆಗೆ ವೈಜ್ಞಾನಿಕ ರೀತಿಯಲ್ಲಿ ಸ್ವತಃ ತಾವೇ ಸೂಕ್ತ ಪರಿಹಾರ ಕಂಡುಕೊಳ್ಳಲು ನೆರವಾಗಿರುವ ಮಕ್ಕಳ ವಿಜ್ಞಾನ ಸಮಾವೇಶವು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ನೆರವಾಗಿದೆ ಎಂದು ಸಮಾವೇಶದ ರಾಜ್ಯ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ. ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ ಕಳೆದ 5 ವರ್ಷಗಳಿಂದ ಕಿರಿಯ ವಿಜ್ಞಾನಿಗಳು ಸತತವಾಗಿ ಆಯ್ಕೆಗೊಂಡಿದ್ದಾರೆ ಎಂದು ಪ್ರೇಮ್‍ಕುಮಾರ್ ತಿಳಿಸಿದ್ದಾರೆ.