ಮಡಿಕೇರಿ, ಡಿ. 10: ಕಳೆದ ಒಂದು ವಾರಗಳಿಂದ ಇಲ್ಲಿನ ನಗರದ ವೇದಾಂತ ಸಂಘ ಸೇರಿದಂತೆ ವಿವಿಧೆಡೆ ನಡೆದ ಭಗವದ್‍ಗೀತಾ ಸಪ್ತಾಹದ ಸಮಾರೋಪ ಸಮಾರಂಭವು ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಆಗಮಿಸಿ ಮಾತನಾಡಿ, ಭಗವದ್‍ಗೀತೆಯ ಒಳಗೆ ಏನಿದೆ ಎಂಬದನ್ನು ನಾವು ತಿಳಿದುಕೊಳ್ಳಬೇಕಾದುದು ನಮ್ಮ ಧರ್ಮವಾಗಿದೆ. ಭಗವತ್ ಗೀತೆ ಒಂದು ಜೀವಕ್ಕೆ ಬೇಕಾದ ಪಠ್ಯಪುಸ್ತಕ. ಹಿಂದೂಗಳ ಪವಿತ್ರ ಗ್ರಂಥ ಆಗಿದ್ದು, ನಮ್ಮ ಮನಸ್ಸೆಂಬದು ಒಂದು ಕುರುಕ್ಷೇತ್ರ- ಧರ್ಮಕ್ಷೇತ್ರವೇ ಆಗಿದೆ ಎಂದು ವಿಶ್ಲೇಷಿಸಿದರು. ಇದನ್ನೆ ಶ್ರೀಕೃಷ್ಣ ಮನುಕುಲಕ್ಕೆ ನೀಡಿದ ದೊಡ್ಡ ಸಂದೇಶವಾಗಿದೆ. ಗೀತೆಯನ್ನು ಅರ್ಥೈಸಿಕೊಂಡು ಓದಿದ್ದೇ ಆದರೆ ಎಲ್ಲವನ್ನು ತಿಳಿದುಕೊಳ್ಳಬಹು ದಾಗಿದೆ ಎಂದರಲ್ಲದೆ, ಜೀವಕ್ಕೆ ಸಂದೇಶ ಕೊಡುವ ಪವಿತ್ರ ಗ್ರಂಥವಾಗಿದ್ದು, ಕಾಮ- ಕ್ರೋಧ, ಮೋಹ, ಮದ, ಮತ್ಸರವನ್ನು ಬಿಡಬೇಕೆಂಬದು ಭಗವತ್‍ಗೀತೆಯಲ್ಲಿದೆ. ಅದಕ್ಕೆ ಭಗವತ್ ಗೀತೆಯ ಒಳಹೋಗುವ ಪ್ರಯತ್ನವಾಗಬೇಕೆಂದು ಸುಬ್ರಾಯ ಸಂಪಾಜೆ ನುಡಿದರು.
ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಶ್ರೀ ಪರಹಿತ ಸ್ವಾಮಿ ಮಹಾರಾಜ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಗೀತಾ ಜಯಂತಿಯ ಈ ಶುಭ ದಿನ ಭಗವಂತನು ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವಾಗಿದ್ದು, ಗೀತೆಯಲ್ಲಿ ಅಡಗಿರುವ ಸತ್ಯಗಳು ಸರ್ವಕಾಲಕ್ಕೂ ಅನ್ವಯವಾಗುತ್ತದೆ. ವಿಷಾದಯೋಗ, ಜ್ಞಾನಯೋಗ, ಸನ್ಯಾಸಯೋಗ, ಧ್ಯಾನಯೋಗ, ವಿಶ್ವರೂಪದರ್ಶನ, ಭಕ್ತಿಯೋಗ ಹೀಗೆ ಪ್ರತಿಯೊಂದು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯಿಸುವಂತಹದೆಂದು, ಇಂತಹ ಮಹಾಗ್ರಂಥವನ್ನು ಪಠಣ ಶ್ರವಣ ಮೂಲಕ ಅಧ್ಯಯನ ಮನನ ಮಾಡಿದರೆ ಮಹಾಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಗೀತೆ ಪಾರಾಯಣವನ್ನು ಪ್ರಶಿಕ್ಷಕಿ ಗೀತಾ ಸಂಪತ್ ನಡೆಸಿಕೊಟ್ಟರು. ಗೀತಾ ಗಿರೀಶ್ ಸ್ವಾಗತಿಸಿ, ಜಯಶೀಲ ಪ್ರಕಾಶ್ ವಂದಿಸಿದರು. ವೇದಿಕೆಯಲ್ಲಿ ಭಗವತ್‍ಗೀತಾ ಅಭಿಯಾನದ ಜಿಲ್ಲಾ ಅಧ್ಯಕ್ಷ ಕೆ.ಎನ್. ದೇವಯ್ಯ ಉಪಸ್ಥಿತರಿದ್ದರು. ಹಿರಿಯ ನಾಗರಿಕ ವೇದಿಕೆಯ ಜಿ.ಟಿ. ರಾಘವೇಂದ್ರ, ಸಂಪತ್ ಕುಮಾರ್, ಸವಿತಾ ಭಟ್, ಡಾ. ಪಾಟ್ಕರ್, ಶಾರದಾ ರಾಮನ್ ಮತ್ತಿತರರು ಹಾಜರಿದ್ದರು.