ನಾಪೋಕ್ಲು, ಅ. 16: ಸಮಾಜಗಳು ಅವರವರ ಆಚಾರ-ವಿಚಾರ, ಸಂಸ್ಕøತಿಯನ್ನು ಉಳಿಸಿ-ಬೆಳೆಸಿ ಇತರರಿಗೆ ಮಾದರಿಯಾಗಬೇಕೇ ಹೊರತು ಸವಾಲು ಆಗಬಾರದು ಎಂದು ಚೇರಂಬಾಣೆಯ ಗೌಡ ಸಮಾಜದ ವತಿಯಿಂದ ಕೊಟ್ಟೂರು ಗ್ರಾಮದ ತಟ್ಟಂಡ ಬಾಣೆಯಲ್ಲಿ ಆಯೋಜಿಸಲಾದ ಕೈಲ್ ಮುಹೂರ್ತ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಕೆ.ಜಿ. ಬೊಪಯ್ಯ ಹೇಳಿದರು.

ಮಕ್ಕಳ ಪ್ರತಿಭೆ ಮತ್ತು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವದರಿಂದ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಮುತುವರ್ಜಿ ವಹಿಸುವದರ ಜೊತೆಗೆ ಪೂರ್ವಿಕರ ಚಿಂತನೆಯನ್ನು ಸಾಕಾರಗೊಳಿಸಬೇಕು ಎಂದ ಬೋಪಯ್ಯ, ಇಲ್ಲಿಯ ಗೌಡ ಸಮಾಜದ ಕಟ್ಟಡ ನಿರ್ಮಾಣಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ ಮುಂದಿನ ಕೈಲ್ ಮುಹೂರ್ತ ಕಾರ್ಯಕ್ರಮ ಸ್ವಂತ ಸಮಾಜದ ಕಟ್ಟಡದಲ್ಲಿ ಆಗುವಂತೆ ಎಲ್ಲರೂ ಸಹಕರಿಸಬೇಕು ಎಂದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕೆಡೆ ಶೋಭಾ ಮೋಹನ್ ಮಾತನಾಡಿ, ಯುವಜನತೆ ಪಟ್ಟಣದ ವ್ಯಾಮೋಹವನ್ನು ಬಿಟ್ಟು ಸ್ವಾವಲಂಬಿ ಜೀವನಕ್ಕೆ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಿ ಎಂದ ಅವರು, ತಮ್ಮ ಹುಟ್ಟೂರಿನಲ್ಲಿ ನೆಲೆನಿಂತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು ಎಂದರು.

ಮಡಿಕೇರಿ ನಗರ ಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಮಾತನಾಡಿ, ಭಾಷೆ ಸಂಸ್ಕøತಿ ಉಳಿದರೆ ಮಾತ್ರ ಸಮಾಜ ಉಳಿಯಲು ಸಾಧ್ಯ. ಆದ್ದರಿಂದ ಇಂದಿನ ಯುವಪೀಳಿಗೆ ಸಂಸ್ಕಾರ, ಅಧ್ಯಯನದೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿರಬೇಕು ಎಂದರು. ಅರೆಭಾಷೆ ಸಂಸ್ಕøತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಚೇರಂಬಾಣೆಯ ಗೌಡ ಸಮಾಜ ಉತ್ತಮ ರೀತಿಯಲ್ಲಿ ಮುಂದುವರಿಯತ್ತಿದ್ದು ಇದಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಈ ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಅವಶ್ಯಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಪ್ಪು ಗಣಪತಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗಿದ್ದು ಸಮಾಜಕ್ಕೆ ಎಲ್ಲರ ನಿಸ್ವಾರ್ಥ ಸೇವೆಯನ್ನು ಕೋರಿದರು. ಈ ಸಂದರ್ಭ ಚೇರಂಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ಅಶೋಕ, ನಿವೃತ್ತ ಇಂಜಿನಿಯರ್ ಕೆದಂಬಾಡಿ ಆರ್. ರಾಜು, ತಾಲೂಕು ಪಂಚಾಯಿತಿ ಸದಸ್ಯ ದಬ್ಬಡ್ಕ ಶ್ರೀಧರ್ ಮಾತನಾಡಿದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್, ಬಾಡಗ ಹುತ್ತರಿ ಫಂಡಿನ ಅಧ್ಯಕ್ಷ ಕುಂಞಲಿ ಮಾದಯ್ಯ, ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿ ಶುಭಕೋರಿದರು. ಬೈಮನ ಜ್ಯೋತಿ ತಿಮ್ಮಯ್ಯ ಪ್ರಾರ್ಥಿಸಿ, ನಿರ್ದೇಶಕ ಮುಕ್ಕಾಟಿ ನಾಣಯ್ಯ ಸ್ವಾಗತಿಸಿದರು. ಪಟ್ಟಡ ಶಿವಕುಮಾರ್ ನಿರೂಪಿಸಿ ಸಮಾಜದ ಕಾರ್ಯದರ್ಶಿ ಬೆಳ್ಳಿಯನ ರವಿ ವಂದಿಸಿದರು. ಇದಕ್ಕೂ ಮೊದಲು ಬೆಳಿಗ್ಗೆ ಕ್ರೀಡಾಕೂಟವನ್ನು ಸಮಾಜದ ಉಪಾಧ್ಯಕ್ಷ ಬೈಮನ ಪೊನ್ನಪ್ಪ ಉದ್ಘಾಟಿಸಿದರು. ಬಳಿಕ ವಿವಿಧ ಕ್ರೀಡಾಕೂಟ ಜರುಗಿತು. - ದುಗ್ಗಳ ಸದಾನಂದ