ವಿಶೇಷ ವರದಿಃ ದಿನೇಶ್ ಮಾಲಂಬಿ

ಆಲೂರು-ಸಿದ್ದಾಪುರ, ಆ. 4: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ ಅನೇಕ ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. 2000ನೇ ಇಸವಿಯಲ್ಲಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಸುಸ್ಸಜ್ಜಿತ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲಾಗಿದ್ದರೂ ಆಸ್ಪತ್ರೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ.

ಈ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸುಮಾರು 40 ಗ್ರಾಮಗಳು ಒಳಪಡುತ್ತದೆ. 30 ಬೆಡ್‍ಗಳನ್ನು ಹೊಂದಿರುವ ಆಸ್ಪತ್ರೆ ಇದಾಗಿದೆ. ಇಲ್ಲ್ಲಿ ವೈದ್ಯಾಧಿಕಾರಿ ಸೇರಿದಂತೆ 5 ವೈದ್ಯರು ಕರ್ತವ್ಯ ನಿರ್ವಹಿಸಬೇಕು. ಆದರೆ ಆಸ್ಪತ್ರೆಯಲ್ಲಿ ಏಕ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆಸ್ಪತ್ರೆಗೆ ನಿತ್ಯ ನೂರಕ್ಕಿಂತ ಹೆಚ್ಚು ಹೊರರೋಗಿಗಳು ಬರುತ್ತಾರೆ, ಮಹಿಳಾ ವೈದ್ಯರು, ಫಿಜಿಶಿಯನ್ ತಜ್ಞ ವೈದ್ಯರ ಅಗತ್ಯವಿದೆ. ಹಲವು ವರ್ಷಗಳಿಂದ ಈ ಹುದ್ದೆ ಖಾಲಿ ಇದೆ. ಈ ಕುರಿತು ಸ್ಥಳೀಯರು ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದರೂ ಪ್ರಯೋಜನವಾಗುತ್ತಿಲ್ಲ. ಇಲ್ಲಿ 18 ಮಂದಿ ವಿವಿಧ ‘ಡಿ’ ಗ್ರೂಪ್ ನೌಕರರ ಹುದ್ದೆ ಖಾಲಿಯಿದ್ದು, ಪ್ರಸ್ತುತ ಕೇವಲ 4 ಮಂದಿ ‘ಡಿ’ ಗ್ರೂಪ್ ನೌಕರರು ಪ್ರಯಾಸದಿಂದ ಕೆಲಸ ಮಾಡುತ್ತಿದ್ದಾರೆ.

2008 ರವರೆಗೆ ಆಸ್ಪತ್ರೆಯ ಒಳರೋಗಿಗಳಿಗೆ ಊಟದ ವ್ಯವಸ್ಥೆ ಇತ್ತು ಅದು ಸಹ ಇದೀಗ ಇಲ್ಲ, 2005ರಲ್ಲಿ ಈ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರ ಸೇವೆಗಾಗಿ ಆ್ಯಂಬ್ಯುಲೆನ್ಸ್ ವಾಹನವನ್ನು ಒದಗಿಸಲಾಗಿತ್ತು. ಆ ವಾಹನ ಒಂದೆರೆಡು ವರ್ಷ ಸೇವೆ ನೀಡುತಿತ್ತು, ಹಳೇ ಕಾಲದ 2 ವಾಹನವೂ ಸೇವೆಗೆ ಯೋಗ್ಯವಾಗಿಲ್ಲ, ಸಾರ್ವಜನಿಕ ರೋಗಿಗಳ ಸೇವೆಗಾಗಿ ಈ ವಾಹನವನ್ನು ಚಲಾಯಿಸಬೇಕಾದರೆ ಹೋದ ಕಡೆಗಳಲ್ಲಿ ರಿಪೇರಿಯಾಗಿ ನಿಂತುಕೊಳ್ಳುತ್ತದೆ, ಸದ್ಯಕ್ಕೆ ಈ ವಾಹನಗಳು ತುಕ್ಕು ಹಿಡಿಯುತ್ತಿದೆ.

ಹೊಸ ಆರೋಗ್ಯ ಕೇಂದ್ರಕ್ಕೆ ಹೊಂದಿಕೊಂಡಂತೆ ಹಳೆಯ ಕಟ್ಟಡವಿದ್ದು, ಇದು ಇಂದೊ ನಾಳೆಯೊ ಬೀಳುವ ಸ್ಥಿತಿಯಲ್ಲಿದ್ದು ಈ ಹಿಂದಿನ ಅವಧಿಯಲ್ಲಿದ್ದ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಆರೋಗ್ಯ ಸ್ಥಾಯಿ ಸಮಿತಿಯ ಅಧÀ್ಯಕ್ಷರು ಸದಸ್ಯರುಗಳು ಬಂದು ವರ್ಷದ ಹಿಂದೆ ಸಭೆ ನಡೆಸಿ ನಾಳೆಯೇ ಈ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿ ತೆರಳಿದವರು ಮತ್ತೆ ಇತ್ತ ಬರುವ ವೇಳೆಗೆ ತಮ್ಮ ಅಧಿಕಾರವನ್ನೇ ಕಳೆದುಕೊಂಡರು.

ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಗ್ರಾ.ಪಂ.ಯವರು ಪಟ್ಟಣದ ತ್ಯಾಜ್ಯವನ್ನು ವಿಲೇವಾರಿ ಮಾಡುವದರಿಂದ, ದುರ್ನಾತ ಬೀರುತ್ತಿದ್ದು, ಇದರಿಂದ ರೋಗಿಗಳು ಹಿಂಸೆ ಪಡುತ್ತಾರೆ. ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವ ಆರೋಗ್ಯ ಕೇಂದ್ರಕ್ಕೆ ಜನಪ್ರತಿನಿಧಿ ಗಳು, ಸರಕಾರ ಮತ್ತು ಆರೋಗ್ಯ ಇಲಾಖೆ ಚಿಕಿತ್ಸೆ ನೀಡಲು ಮುಂದಾಗಬೇಕಾಗಿದೆ.

ಆಸ್ಪತ್ರೆಗೆ ಮಹಿಳಾ ವೈದ್ಯರು ಮತ್ತು ತಜ್ಞವೈದ್ಯರ ಹುದ್ದೆಗಳು ಖಾಲಿ ಇದ್ದು 14 ಮಂದಿ ‘ಡಿ’ ಗ್ರೂಪ್ ನೌಕರರ ಹುದ್ದೆಯೂ ಖಾಲಿಯಿದೆ. ಸರಕಾರದಿಂದ ನಮಗೆ ದೊರೆಯುತ್ತಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸೇವೆ ನೀಡಲಾಗುತ್ತಿದೆ. ಕೆಲವೊಂದು ಸಂಬಂಧಪಟ್ಟ ಸಭೆಗಳಿಗೆ ತೆರಳಲೇಬೇಕಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಹೇಳುತ್ತಾರೆ. ಈ ಆಸ್ಪತ್ರೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ, ಆಸ್ಪತ್ರೆಗೆ ಮಹಿಳಾ ವೈದ್ಯರ ಅಗತ್ಯ ಇದೆ, ಸಾವಿರಾರು ರೋಗಿಗಳು ಸೇವೆಯನ್ನು ಪಡೆಯಬಹುದು, ಅಂಬ್ಯುಲೆನ್ಸ್ ಅಗತ್ಯವಿದ್ದು, ಉತ್ತಮವಾದ ವಾಹನವನ್ನು ಈ ಆಸ್ಪತ್ರೆಯ ಸೇವೆಗೆ ಒದಗಿಸಿದರೆ, ಹಳ್ಳಿಗಳ ರೋಗಿಗಳಿಗೆ ಒಳಿತಾಗುತ್ತದೆ. ವೈದ್ಯರು ಇಲ್ಲದೆ ಅನೇಕ ರೋಗಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಜಿ.ಪಂ. ಸಭೆಯಲ್ಲಿ ನಾನು ಇಲ್ಲಿ ಆ್ಯಂಬ್ಯುಲೆನ್ಸ್ ಇಲ್ಲದಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಸಂಬಂಧಪಟ್ಟವರು ಇಲ್ಲಿ ಇದೆ ನೀವು ನೋಡಿಲ್ಲ ಎಂದರು. ಆದರೆ ಇಲ್ಲಿಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು ಇಲ್ಲಿಯ ಅವ್ಯವಸ್ಥೆಗಳು. ಮುಂದೆ ಸಂಬಂಧಪಟ್ಟವರಲ್ಲಿ ಚರ್ಚಿಸಿ ಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ವೈದ್ಯರ ಸಮಸ್ಯೆ ಇದ್ದು, ಪ್ರತಿ ತಿಂಗಳು ಸಹ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಇರುವ ಸಮಸ್ಯೆಗಳನ್ನು ಸಂಬಂಧಪಟ್ಟವರಿಗೆ ಕಳುಹಿಸುತ್ತಿದ್ದೇನೆ. ಶನಿವಾರಸಂತೆ ಯಲ್ಲಿರುವ ವೈದ್ಯರು ಅನಿವಾರ್ಯವಾಗಿ ಸಭೆಗಳಿಗೆ ಹೋಗಲೇಬೇಕಾದಾಗ ಸಮಸ್ಯೆ ಎದುರಾಗುತ್ತಿದೆ. ಕೆಲ ಸಮಸ್ಯೆಗಳು ಸರ್ಕಾರದ ಮಟ್ಟದಲ್ಲಿ ಆಗ ಬೇಕಾಗಿದ್ದು, ನಾವುಗಳು ಆರೋಗ್ಯ ಕೇಂದ್ರದಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸದೇ ಇದ್ದಾಗ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ವೈದ್ಯರನ್ನು ನೇಮಿಸುವದು ನಮಗೆ ಸಾಧ್ಯವಾಗುತ್ತಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ ಹೇಳಿದ್ದಾರೆ.