ಮಡಿಕೇರಿ, ಡಿ. 1 :ಪ್ರಸ್ತುತ ನೋಟು ಚಲಾವಣೆಯ ವಿದ್ಯಮಾನಗಳು ಸಾಕಷ್ಟು ಸಮಸ್ಯೆ ಮತ್ತು ಸಂಕಷ್ಟಗಳನ್ನು ತಂದೊಡ್ಡಿರುವದು ನಿಜವಾದರೂ ಈ ಸಮಸ್ಯೆಗಳೆಲ್ಲ ತಾತ್ಕಾಲಿಕವಾಗಿದ್ದು, ದೀರ್ಘಾವಧಿಯಲ್ಲಿ ಆರ್ಥಿಕ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ ಎಂದು ಬ್ರಿಕ್ಸ್ ಬ್ಯಾಂಕಿನ ಅಧ್ಯಕ್ಷ ಕೆ.ವಿ. ಕಾಮತ್ ಅಭಿಪ್ರಾಯಪಟ್ಟಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಪ್ರಸ್ತುತ ಆರ್ಥಿಕ ವ್ಯವಸ್ಥೆಯ ಸಂಕಷ್ಟಗಳು, ನೋಟು ಬದಲಾವಣೆಯ ಪ್ರಕ್ರಿಯೆಗಳು ಹಾಗೂ ಒಟ್ಟು ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆ ಕಾಣಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಖಾಸಗಿ ಭೇಟಿ ನೀಡಿದ್ದ ಕೆ.ವಿ. ಕಾಮತ್ ಅವರು ಸುಂಟಿಕೊಪ್ಪ ಸಮೀಪದ ಮತ್ತಿಕಾಡು ತೋಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇಂದಿನ ಆರ್ಥಿಕ ಪರಿಸ್ಥಿತಿಯ ಆಶಾದಾಯಕ ಬೆಳವಣಿಗೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಕ್ರಮಗಳು ಭಾರತದ ಆರ್ಥಿಕ ವ್ಯವಸ್ಥೆಯು “ಡಿಜಿಟಲ್ ಆರ್ಥಿಕ ವ್ಯವಸ್ಥೆ”ಗೆ ಪೂರಕವಾಗಿದೆ ಎಂದರು. ನೋಟು ಬದಲಾವಣೆ ಮತ್ತು ಆರ್ಥಿಕ ವ್ಯವಸ್ಥೆಯ ಬದಲಾವಣೆಯನ್ನು ಘೋಷಿಸುವ ಸಂದರ್ಭ ಗೌಪ್ಯತೆಯನ್ನು ಕಾಯ್ದುಕೊಳ್ಳುವದು ಅನಿವಾರ್ಯವಾಗಿತ್ತೆಂದು ಸಮರ್ಥಿಸಿಕೊಂಡರು. ನೂತನ ನೋಟುಗಳು ಮುದ್ರಣಗೊಂಡು ಎಲ್ಲಾ ಬ್ಯಾಂಕ್ಗಳಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಎಲ್ಲವೂ ಸುಗಮವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ರೀತಿಯ ದಿಟ್ಟ ಕ್ರಮ ಇಲ್ಲಿಯವರೆಗೆ ಯಾವದೇ ದೇಶದಲ್ಲಿ ನಡೆದ ಬಗ್ಗೆ ಮಾಹಿತಿ ಇಲ್ಲ. ಇದರಲ್ಲಿ ಮೂರು ಮುಖ್ಯ ಉದ್ದೇಶಗಳು ಒಳಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ, ಖೋಟಾ ನೋಟು ಚಲಾವಣೆಯ ವಿರುದ್ಧ ಮತ್ತು ದೇಶದಲ್ಲಿ ನಡೆಯುತ್ತಿರುವ ಆಂತರಿಕ ಮತ್ತು ವಿಚ್ಛಿದ್ರಕಾರಿ ಶಕ್ತಿಗಳಿಗೆ ಸರಬರಾಜಾಗುತ್ತಿದ್ದ ಹಣವನ್ನು ತಡೆ ಹಿಡಿಯಲು ಎಂದು ವಿಶ್ಲೇಷಿಸಿದರು.
ಒಂದು ಹಂತದಲ್ಲಿ ಗ್ರಾಮೀಣ ಜನತೆ ಹಾಗೂ ಸಣ್ಣ ಮತ್ತು ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದೆ. ಆದರೆ ಅತ್ಯಾಧುನಿಕ ತಂತ್ರಜ್ಞಾನದ ನೆರವನ್ನು ಬಳಸಿ ಆನ್ಲೈನ್ ಪಾವತಿಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಮೊಬೈಲ್ ಫೋನ್ ಬಳಕೆಯ ಮೂಲಕ ಹಣ ಕಾಸಿನ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಯಾವದೇ ತೊಂದರೆಯಾಗಿಲ್ಲ ಎಂದು ಕೆ.ವಿ.ಕಾಮತ್ ಸ್ಪಷ್ಟಪಡಿಸಿದರು.
ತಾವು ಐಸಿಐಸಿಐ ಬ್ಯಾಂಕಿನ ಅಧ್ಯಕ್ಷರಾಗಿದ್ದಾಗ ಅಂದರೆ 2001-02ರಲ್ಲಿ ದೇಶದಲ್ಲಿ 1,000 ಎಟಿಎಂ ಶಾಖೆಗಳನ್ನು ತೆರೆಯಲು ಉದ್ದೇಶಿಸಿದಾಗ ಜನ ನಕ್ಕಿದ್ದರು. ಎಟಿಎಂಗೆ ಯಾರು ಹೋಗುತ್ತಾರೆಂದು ಆಡಿಕೊಂಡಿದ್ದರು. ಆದರೆ ಇಂದೇನಾಗಿದೆ ಎಂದು ಉದಾಹರಣೆ ಸಹಿತ ವಿವರಿಸಿದ ಅವರು ಹಂತ ಹಂತವಾಗಿ ಎಲ್ಲಾ ವರ್ಗದ ಜನ ಡಿಜಿಟಲ್ ಆರ್ಥಿಕ ವ್ಯವಸ್ಥೆಯನ್ನು ಹೊಂದಿಕೊಂಡಾಗ ನಮ್ಮ ಆರ್ಥಿಕ ವ್ಯವಸ್ಥೆ ಅತ್ಯುತ್ತಮವಾಗುತ್ತದೆ ಎಂದು ವಿವರಿಸಿದರು.
ವಿದೇಶದಲ್ಲಿರುವ ಕಪ್ಪು ಹಣ ತರುವದನ್ನು ಬಿಟ್ಟು ಪ್ರಧಾನಿ ಮೋದಿ ಅವರು ದೇಶದೊಳಗಿನ ಅರ್ಥ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ಭಾರತೀಯರು ವಿದೇಶದಲ್ಲಿರುವ ತಮ್ಮ ಕಪ್ಪು ಹಣದ ಬಗ್ಗೆ
(ಮೂರನೇ ಪುಟದಿಂದ)
ಮಾಹಿತಿಯನ್ನು ಘೋಷಿಸಿ ಎಂದು ಹೇಳಿದ್ದರೂ ಅದು ಫಲಕಾರಿಯಾಗಿರಲಿಲ್ಲ. ನಂತರ ಇನ್ನೊಂದು ಹಂತದಲ್ಲಿ ದೇಶದೊಳಗಿನ ಕಪ್ಪು ಹಣವನ್ನು ಹೊಂದಿರುವವರು ಅದನ್ನು ಕಾನೂನು ಬದ್ಧ ಮಾಡಿ ಎಂಬ ಅವಕಾಶ ಕೊಟ್ಟರೂ ಫಲಪ್ರದವಾಗಿರಲಿಲ್ಲ. ಕೊನೆಯ ಅಸ್ತ್ರವಾಗಿ ಮೋದಿ ನೋಟು ಬದಲಾವಣೆಯ ವ್ಯವಸ್ಥೆಯನ್ನು ಮಾಡಿದ್ದು ಅದು ಫಲ ನೀಡಿದೆ ಎಂದು ಕಾಮತ್ ವಿಶ್ಲೇಷಿಸಿದರು.
ಜನಸಾಮಾನ್ಯರಿಗೆ ಈ ಬದಲಾವಣೆಯ ಫಲಶ್ರುತಿ ಸಿಗಬೇಕಾದರೆ 6 ತಿಂಗಳಿನಿಂದ ಒಂದು ವರ್ಷದ ಕಾಲಾವಧಿ ಬೇಕಿದ್ದು, ಸಾಲದ ಮೇಲಿನ ಬಡ್ಡಿದರಗಳು ಕಡಿಮೆಯಾಗುವಾಗ ಎಲ್ಲಾ ವರ್ಗದ ಜನ ಸಂತೋಷದಿಂದ ಈ ಆರ್ಥಿಕ ಬದಲಾವಣೆಯನ್ನು ಸ್ವೀಕರಿಸುತ್ತಾರೆ ಎಂದು ಕಾಮತ್ ಅಭಿಪ್ರಾಯಪಟ್ಟರು.
ಡಿಜಿಟಿಲ್ ಆರ್ಥಿಕ ವ್ಯವಸ್ಥೆಯನ್ನು ಈ ಹಿಂದೆಯೇ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಂದನ್ ನಿಲೆಕೇಣಿ ಅವರು ಪ್ರಯತ್ನಿಸಿದ್ದರು. ಇದೀಗ ಅವರು ಪ್ರಧಾನಮಂತ್ರಿ ಮೋದಿ ಅವರು ರಚಿಸಿರುವ ಉನ್ನತ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಸ್ಥಾನ ಪಡೆದಿದ್ದು, ಅರ್ಥ ವ್ಯವಸ್ಥೆಯಲ್ಲಿ ಉಂಟಾಗಿರುವ ಗೊಂದಲ ಗೋಜಲುಗಳು ಶೀಘ್ರ ಪರಿಹಾರವಾಗಿ ನಗದು ರಹಿತ ಅರ್ಥ ವ್ಯವಸ್ಥೆ ಜಾರಿಗೊಂಡಾಗ ಜನರಿಗೂ ಮತ್ತು ಒಟ್ಟು ಸಮಾಜಕ್ಕೆ ಬಹುಪಯೋಗಿ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ವಿಶ್ವಾಸದಿಂದ ನುಡಿದರು.
ಭಾರತದ ಈ ದೊಡ್ಡ ಕ್ರಾಂತಿಕಾರಿ ನಡೆಯನ್ನು ಬ್ರಿಕ್ಸ್ ಬ್ಯಾಂಕ್ ಮತ್ತು ಸದಸ್ಯ ರಾಷ್ಟ್ರಗಳು ಅತ್ಯಂತ ಧನಾತ್ಮಕವಾಗಿ ತೆಗೆದುಕೊಂಡಿದ್ದು ಭಷ್ಟ್ರಾಚಾರ ನಿಗ್ರಹ ಮತ್ತು ಕಪ್ಪು ಹಣ ಸಂಗ್ರಹದ ವಿರುದ್ಧ ಸವಾಲಿನ ಕೆಲಸ ಎಂದು ಬಣ್ಣಿಸಿದೆ. ಆದರೆ ಈ ಹೆಜ್ಜೆಯನ್ನು ತೆಗೆದುಕೊಳ್ಳಲೇ ಬೇಕಾದ ಪರಿಸ್ಥಿತಿಗೆ ಭಾರತ ತಲುಪಿತ್ತು ಎಂದು ಹೇಳುವದನ್ನು ಕಾಮತ್ ಮರೆಯಲಿಲ್ಲ.
ಮುಂದಿನ ಕ್ರಮಗಳಾಗಿ ಇ-ಸ್ವತ್ತು ಮತ್ತು ಚಿನ್ನದ ಮೇಲಿನ ನಿಯಂತ್ರಣವನ್ನು ಪ್ರಧಾನಿ ಮೋದಿ ಹೇರುತ್ತಾರೆ ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಕರ್ನಾಟಕ ರಾಜ್ಯ ಇ-ಸ್ವತ್ತು ದಾಖಲೀಕರಣದಲ್ಲಿ ದೇಶಕ್ಕೆ ಮಾದರಿಯಾಗಿದೆ. ಕನ್ನಡಿಗರು ಇ-ಸ್ವತ್ತಿನ ಬಗ್ಗೆ ಹೆದರಬೇಕಿಲ್ಲ ಎಂದು ಹೇಳಿದರಲ್ಲದೆ ಚಿನ್ನದ ಮೇಲಿನ ನಿಯಂತ್ರಣದ ಬಗ್ಗೆ ಯಾವದೇ ಮಾಹಿತಿ ತನ್ನಲ್ಲಿ ಇಲ್ಲ ಎಂದು ಹೇಳಿದರು.
ಬ್ರಿಕ್ಸ್ ಬ್ಯಾಂಕ್ ಬಗ್ಗೆ
ಬ್ರಿಕ್ಸ್ ಬ್ಯಾಂಕ್ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ವಿಶ್ವದಲ್ಲಿ ಹಸುರೀಕರಣ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತಾದ ಬೃಹತ್ ಯೋಜನೆಗಳನ್ನು ಇಟ್ಟುಕೊಂಡು ಈ ಬ್ಯಾಂಕ್ನ್ನು ‘ಹೊಸ ಅಭಿವೃದ್ಧಿ ಬ್ಯಾಂಕ್’ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಮೊದಲ ವರ್ಷದಲ್ಲಿ 450 ಮಿಲಿಯನ್ ಡಾಲರ್ ಸಾಲ ಯೋಜನೆಯನ್ನು ಮಾಡಲಾಗಿದ್ದು, ಈ ವರ್ಷಕ್ಕೆ 1,500 ಮಿಲಿಯನ್ ಡಾಲರ್ ಸಾಲ ಯೋಜನೆಯನ್ನು ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು. ಭಾರತಕ್ಕೆ ಎರಡು ಸಾಲ ಯೋಜನೆಗಳನ್ನು ತಯಾರಿಸಲಾಗಿದ್ದು, ಸೋಲಾರ್ ಯೋಜನೆಗಳನ್ನು ಅಳವಡಿಸಲು ಮತ್ತು ರಸ್ತೆಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕುರಿತಾಗಿದ್ದು, ಇವುಗಳ ಒಟ್ಟು ಮೌಲ್ಯ 600 ಮಿಲಿಯನ್ ಡಾಲರ್ ಎಂದು ಕಾಮತ್ ಹೇಳಿದರು.
ಈ ಸಂದರ್ಭ ಮತ್ತಿಕಾಡು ತೋಟದ ಮಾಲೀಕರು ಮತ್ತು ಮಂಗಳೂರು ಗಣೇಶ ಬೀಡಿ ಸಂಸ್ಥೆಯ ಮಾಲೀಕ ಎಂ. ಜಗನಾಥ್ ಶೆಣೈ ಹಾಗೂ ಮಾಧ್ಯಮ ಸಂವಾದವನ್ನು ಆಯೋಜಿಸಲು ಸಹಕರಿಸಿದ ಸಿ.ಹರೀಶ್ ಚಂದ್ರ ಪೈ ಉಪಸ್ಥಿತರಿದ್ದರು.