ಸುಂಟಿಕೊಪ್ಪ, ಜ. 4: ನಮ್ಮ ಬದುಕು ಕನ್ನಡಿ ಇದ್ದಂತೆ. ಸಮಯ ಬಹಳ ಮುಖ್ಯ, ಸಮಯದ ಮಹತ್ವವನ್ನು ಎಲ್ಲರೂ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಶಕ್ತಿ ದಿನಪತ್ರಿಕೆಯ ಸಂಪಾದಕ ಬಿ.ಜಿ. ಅನಂತಶಯನ ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪದ ಬೋಯಿಕೇರಿಯಲ್ಲಿ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಎನ್‍ಎಸ್‍ಎಸ್ ಶಿಬಿರದ ಸಮಾರೋಪ ಸಮಾರಂಭದ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.
ಪ್ರಪಂಚವು ನಾವು ನೋಡುವ ದೃಷ್ಟಿಕೋನದ ಮೇಲೆ ಅವಲಂಬಿತ ವಾಗಿರುತ್ತದೆ. ಎಲ್ಲರೂ ತಮ್ಮಲ್ಲಿ ಒಳ್ಳೆಯ ನಂಬಿಕೆ, ಭಾವನೆ ಇತ್ಯಾದಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಸ್ತು ವ್ಯಕ್ತಿಯ ಬದುಕನ್ನು ಬದಲಾಯಿಸುತ್ತದೆ. ಆ ನಿಟ್ಟಿನಲ್ಲಿ ಶಿಸ್ತು ದೈನಂದಿನ ಬದುಕಿನಲ್ಲಿ ಇರಲೇ ಬೇಕಾಗುತ್ತದೆ ಎಂದರು.
ಬೋಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಆರ್. ರಾಜು ಮಾತನಾಡಿ, 7 ದಿನಗಳಿಂದ ನಡೆಸಿದ ಕೆಲಸ ತೃಪ್ತಿಕರವಾಗಿದೆ. ಆದರೆ ಈ ಸೇವೆ ಇಲ್ಲಿ ಮಾತ್ರ ಸೀಮಿತವಾಗದೆ ಆ ಕಾರ್ಯವನ್ನು ಮುಂದುವರಿಸಬೇಕಾಗಿದೆ ಎಂದರಲ್ಲದೇ ಪ್ರತಿಯೊಬ್ಬರಿಗೂ ಸಮಯಪಾಲನೆ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ತಂದೆ, ತಾಯಿಯರಿಗೆ ಗೌರವವನ್ನು ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ.ವೈ ವಹಿಸಿದ್ದರು. ವೇದಿಕೆಯಲ್ಲಿ ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎಂ. ನಿಷ್ಮ, ಸದಸ್ಯೆ ಶಾಂತಿ ಸುಂದರಿ, ಶಿಬಿರಾಧಿಕಾರಿ ಬಿ.ಆರ್. ಶಶಿಧರ್, ಸಹಾಯಕ ಶಿಬಿರಾಧಿಕಾರಿ ಗಳಾದ ಕೆ.ಎಸ್. ಪೂರ್ಣಿಮಾ, ಪಿ.ಬಿ. ಸುರೇಶ್, ಕೆ.ಎಸ್. ಮೋಹನ್, ವಿದ್ಯಾರ್ಥಿ ಘಟಕದ ನಾಯಕರಾದ ಪುನೀತ್ ಪ್ರಸಾದ್, ಧರಣಿ ಇದ್ದರು.