ಸೋಮವಾರಪೇಟೆ, ಜು. 30: ಪ್ರಸಕ್ತ ಸಾಲಿನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಂಬಂಧ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕರೆದಿದ್ದ ಸಭೆಗೆ ಅಧಿಕಾರಿಗಳೇ ಗೈರು ಹಾಜರಾದ ಹಿನ್ನೆಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತಹಶೀಲ್ದಾರ್ ಶಿವಪ್ಪ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಿದರು.
ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಶಿವಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಹಬ್ಬಗಳ ಸಮಿತಿಯ ಸಭೆಗೆ ಬಹುತೇಕ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದುದು ತಹಶೀಲ್ದಾರ್ ಅವರ ಅಸಮಾಧಾನಕ್ಕೆ ಕಾರಣವಾಯಿತು.
ಕೇವಲ ಕಂದಾಯ ಹಾಗೂ ಬೆರಳೆಣಿಕೆಯ ಇಲಾಖೆಗೆ ಮಾತ್ರ ಸ್ವಾತಂತ್ರ್ಯ ದಿನಾಚರಣೆ ಸೀಮಿತ ವಾಗಿಲ್ಲ. ಎಲ್ಲರಿಗೂ ಜವಾಬ್ದಾರಿ ಇದೆ. ಆದರೆ ಸರ್ಕಾರಿ ಇಲಾಖೆ ಅಧಿಕಾರಿಗಳು ಇದನ್ನು ಮರೆತಂತಿದೆ. ಆದ್ದರಿಂದ ಸಭೆಯನ್ನು ಮುಂದೂಡುವ ಬಗ್ಗೆ ಪ್ರಸ್ತಾಪಿಸಿದಾಗ ಸಭೆಗೆ ಗೈರಾಗಿರುವವರಿಗಾಗಿ ಸಭೆಯನ್ನು ಮುಂದೂಡುವದು ಬೇಡ. ಬದಲಾಗಿ ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸುವಂತೆ ಅಭಿಪ್ರಾಯ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗದಿರುವ ಇಲಾಖೆಯ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು.
ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಹಶೀಲ್ದಾರರಿಂದ ಧ್ವಜಾರೋಹಣ, ಶಾಸಕರಿಂದ ಕಾರ್ಯಕ್ರಮದ ಅಧ್ಯಕ್ಷತೆ, ವಿವಿಧ ಜನಪ್ರತಿನಿಧಿಗಳನ್ನು ಆಹ್ವಾನಿಸುವದು, ಶಾಲಾ, ಕಾಲೇಜು ಮಕ್ಕಳಿಗೆ ದೇಶಭಕ್ತಿ ಸ್ಪರ್ಧೆ ನಡೆಸುವಂತೆ ತೀರ್ಮಾನಿಸ ಲಾಯಿತು.
ಕಾರ್ಯಕ್ರಮದಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ ಒಬ್ಬರು ಹಾಗೂ ಸಮಾಜ ಸೇವೆಗೆ ಸಂಬಂಧಿಸಿದಂತೆ ಸನ್ಮಾನಿಸಲು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸಮಿತಿ ಸದಸ್ಯ ಎಸ್. ಮಹೇಶ್ ಮತ್ತು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಅವರನ್ನೊಳ ಗೊಂಡ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ರಾಷ್ಟ್ರೀಯ ಹಬ್ಬಗಳ ಸಮಿತಿ ಕಾರ್ಯದರ್ಶಿ ಬಿ.ಇ.ಓ. ಮಲ್ಲೇಸ್ವಾಮಿ ಉಪಸ್ಥಿತರಿದ್ದರು. ಅರಣ್ಯ, ಆಹಾರ, ಖಜಾನೆ, ರಿಜಿಸ್ಟ್ರಾರ್, ಕಾರ್ಮಿಕ, ಅಬಕಾರಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು.