ಸುಂಟಿಕೊಪ್ಪ, ಆ. 5: ಮಹಿಳೆಯರು ಸಂಸಾರದ ಹೊರೆಯೊಂದಿಗೆ ಸಮಾಜದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಸಬಲೀಕರಣ ಹೊಂದಲು ಸ್ವಸಹಾಯ ಸಂಘಗಳು ಸಹಕಾರಿ ಯಾಗಲಿದೆ ಎಂದು ಕಂಬಿಬಾಣೆ ಶ್ರೀರಾಮ ಮಂದಿರ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಡಾ. ಶಶಿಕಾಂತ ರೈ ಹೇಳಿದರು.

ಸುಂಟಿಕೊಪ್ಪ ನಾಡು ಪ್ರೌಢಶಾಲೆ ಕೊಡಗರಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಂಟಿಕೊಪ್ಪ ವಲಯದ ಕೊಡಗರಹಳ್ಳಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಹಿಳೆಯರು ಹಿಂದಿನಂತೆ ಮನೆಯಲ್ಲೇ ಕೂರುವ ಪರಿಸ್ಥಿತಿ ಇಂದಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಛಾಪು ಮೂಡಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸರ್ವ ತೋಮುಖ ಅಭಿವೃದ್ಧಿಗೆ ಬೆಂಬಲ ವಾಗಿ ನಿಂತಿದೆ ಎಂದು ಹೇಳಿದರು. ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸುಂಟಿಕೊಪ್ಪದ ಠಾಣಾಧಿಕಾರಿ ಅನೂಪ್ ಮಾದಪ್ಪ, ಮಹಿಳೆಯರು, ಕುಟುಂಬದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಎದುರಿಸುತ್ತಿರುವ ದೌರ್ಜನ್ಯಗಳನ್ನು ಕಾನೂನಿನಡಿ ದೂರು ಸಲ್ಲಿಸಿದರೆ ಅದನ್ನು ಹೇಗೆ ಬಗಹರಿಸಿಕೊಳ್ಳ ಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು. ನೂತನ ಅಧ್ಯಕ್ಷೆ ಮೈನಾ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ವಹಣಾ ಸಮನ್ವಯಾಧಿಕಾರಿ ಸುಕರಾಜ್, ಕೊಡಗರಹಳ್ಳಿ ಎಜುಕೇಷನ್ ಸೊಸೈಟಿಯ ಕಾರ್ಯ ದರ್ಶಿ ಕೆ.ಎಸ್. ಮಂಜುನಾಥ್ ಮಾತನಾಡಿದರು. ಮೊದಲಿಗೆ ಸೌಮ್ಯ ಪ್ರಾರ್ಥಿಸಿ, ಸೇವಾಪ್ರತಿನಿಧಿ, ಮೇಲ್ವಿಚಾರಕಿ ಸರಸ್ವತಿ ನಿರೂಪಿಸಿ, ಜಯಲಕ್ಷ್ಮಿ ಸ್ವಾಗತಿಸಿ, ವಂದಿಸಿದರು.