ಕುಶಾಲನಗರ, ಜ. 16: ರಾಜ್ಯದಲ್ಲಿ ಸಧ್ಯದಲ್ಲಿಯೇ 550 ಪಶುವೈದ್ಯರ ನೇಮಕಾತಿ ಮಾಡಲಾಗುವದು ಎಂದು ರಾಜ್ಯ ಪಶುಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ. ಅವರು ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸಕ್ತ ರಾಜ್ಯದಲ್ಲಿ 2590 ಹುದ್ದೆಗಳು ಖಾಲಿಯಿದ್ದು ಮಾರ್ಚ್ ವೇಳೆಗೆ ನೇಮಕಾತಿ ಪೂರ್ಣಗೊಳಿಸ ಲಾಗುವದು. ಕೆಪಿಎಸ್‍ಸಿ ಮೂಲಕ ನೇರ ನೇಮಕಾತಿಗೆ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ಸಂಖ್ಯೆ ಕ್ಷೀಣಗೊಂಡ ಬಗ್ಗೆ ಪ್ರತಿಕ್ರಿಯೆ ಬಯಸಿದಾಗ ಉತ್ತರಿಸಿದ ಸಚಿವರು, ಈ ಚುನಾವಣೆಗಳು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆಯೇ ಹೊರತು ಪಕ್ಷದ ನೆಲೆಗಟ್ಟಿನಲ್ಲಿ ನಡೆಯುವಂತಹದ್ದಲ್ಲ ಎಂದರು. ಹಾಸನ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದಾರೆ. ಅಲ್ಲದೆ ಶೇಕಡವಾರು ಮತಗಳು ಕೂಡ ಏರಿಕೆ ಕಂಡಿವೆ ಎಂದರು.
ಕಾವೇರಿ ನದಿ ಮಾಲಿನ್ಯದ ಬಗ್ಗೆ ಸಚಿವರು ಮಾತನಾಡಿ, ನದಿ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಯಾಗಿದೆ. ನದಿ ತಟಗಳ ಒತ್ತುವರಿ ತೆರವುಗೊಳಿಸಲು ರಾಜ್ಯ ಸರಕಾರ ಕಾರ್ಯಯೋಜನೆ ರೂಪಿಸಲಿದೆ ಎಂದರು. ಕಾವೇರಿ ನದಿ ತಟದ ತಡೆಗೋಡೆ ನಿರ್ಮಾಣಕ್ಕಾಗಿ ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ 60 ಕೋಟಿ ರೂಗಳ ಹಣ ಮೀಸಲಿರಿಸಲಾಗಿದೆ ಎಂದು ಅವರು ತಿಳಿಸಿದರು.
ಕೊಡಗು ಜಿಲ್ಲೆಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ.ಪ್ರದೀಪ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವ ಎ.ಮಂಜು, ಪಕ್ಷ ಉತ್ತಮ ಮುಖಂಡ ರೊಬ್ಬರನ್ನು ಕಳೆದು ಕೊಂಡಿರುವದು ನಿಜಕ್ಕೂ ದುಃಖಕರ ವಿಚಾರ ಎಂದ ಅವರು, ಬಹಳ ಹಿಂದಿನಿಂದಲೂ ಅವ ರೊಂದಿಗೆ ತನ್ನ ಒಡನಾಟ ಇದ್ದ ಬಗ್ಗೆ ಮಾಹಿತಿ ನೀಡಿದರು. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸಲು ದೇವರು ಶಕ್ತಿ ನೀಡಲಿ ಎಂದು ಆಶಿಸಿದರು.