ಮಡಿಕೇರಿ, ಜ.22 : ಸೋಮವಾರಪೇಟೆ ತಾ.ಪಂ ಸಾಮಾನ್ಯ ಸಭೆಯ ಸಂದರ್ಭ ಕಾಂಗ್ರೆಸ್ ಸದಸ್ಯ ಅನಂತಕುಮಾರ್ ಅವರನ್ನು ಕಾನೂನು ಬಾಹಿರವಾಗಿ ಹೊರ ದಬ್ಬಿದ ಮೂವರು ಬಿಜೆಪಿ ಸದಸ್ಯರನ್ನು ಬಂಧಿಸಬೇಕು ಹಾಗೂ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಕೆ.ಮಂಜುನಾಥ್ ಕುಮಾರ್, ತಾ.ಪಂ ಸಭೆಯಲ್ಲಿ ಬಿಜೆಪಿ ಸದಸ್ಯರು ನಡೆದುಕೊಂಡ ರೀತಿ ಅತ್ಯಂತ ಖಂಡನೀಯವೆಂದರು. ವಿಷಯಾ ಧಾರಿತ ರಾಜಕಾರಣವನ್ನು ಮಾಡುವಲ್ಲಿ ವಿಫಲವಾಗಿರುವ ಬಿಜೆಪಿ ತೋಳ್ಬಲ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಭಾರತೀಯ ಜನತಾ ಪಾರ್ಟಿ ಎಂದು ಗುರುತಿಸಿಕೊಂಡಿದ್ದ ಬಿಜೆಪಿ ಇಂದು “ಭಾರೀ ಜನ ವಿರೋಧಿ ಪಾರ್ಟಿ” ಎಂದು ಪರಿವರ್ತನೆ ಯಾಗುತ್ತಿದೆ. ಈ ದೇಶದಲ್ಲಿ ಕಾನೂನು ದೊಡ್ಡದೇ ಹೊರತು ಕಾನೂನಿನ ಎದುರು ಯಾರೂ ದೊಡ್ಡವರಲ್ಲ ಎನ್ನುವದನ್ನು ಬಿಜೆಪಿ ಮಂದಿ ಮೊದಲು ಅರ್ಥ ಮಾಡಿಕೊಳ್ಳ ಬೇಕಾಗಿತ್ತು. ಆದರೆ ಕಾನೂನು ಹಾಗೂ ಸಂವಿಧಾನದ ಮೇಲೆ ಗೌರವವಿಲ್ಲದ ಬಿಜೆಪಿ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದೆ ಎಂದು ಮಂಜುನಾಥ್ ಕುಮಾರ್ ಟೀಕಿಸಿದರು.

ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ತಾ.ಪಂ ಸಭೆಯಿಂದ ಕಾಂಗ್ರೆಸ್ ಸದಸ್ಯ ಅನಂತಕುಮಾರ್ ಅವರನ್ನು ಹೊರ ದಬ್ಬಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಸದಸ್ಯರಾದ ಬಲ್ಲಾರಂಡ ಮಣಿಉತ್ತಪ್ಪ, ಧರ್ಮಪ್ಪ ಹಾಗೂ ಚಂಗಪ್ಪ ಅವರುಗಳನ್ನು ಬಂಧಿಸಬೇಕು ಮತ್ತು ಮೂವರ ಸದಸ್ಯತ್ವ ರದ್ದತಿಗೆ ಪಂಚಾಯತ್ ರಾಜ್ ಇಲಾಖೆಗೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು. ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾ.23 ರಂದು ಸೋಮವಾರಪೇಟೆ ತಾ.ಪಂ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಲಾಗುವದೆಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ, ಜಿ.ಪಂ ಸದಸ್ಯರಾಗಿದ್ದ ಮಣಿಉತ್ತಪ್ಪ ಅವರು ಇದೀಗ ತಾ.ಪಂ ಸದಸ್ಯ ಸ್ಥಾನದಲ್ಲಿದ್ದಾರೆ. ನಿಯಮ ಬಾಹಿರ ಕೃತ್ಯಗಳನ್ನು ನಡೆಸಲು ಬಿಜೆಪಿಗೆ ರಾಜಕೀಯವಾಗಿ ಕೆಳಮಟ್ಟಕ್ಕಿಳಿಯುತ್ತಿರುವ ಇಂತಹವರ ಅಗತ್ಯವಿದೆ ಎಂದು ಟೀಕಿಸಿದರು. ತಾ.ಪಂ ನಲ್ಲಿ ಅಹಿತಕರ ಘಟನೆ ನಡೆಯಲು ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಕೈಜೋಡಿಸಿದ್ದಾರೆ ಮತ್ತು ಬಿಜೆಪಿಯ ಮಹಿಳಾ ಸದಸ್ಯರು ಸಹಕಾರದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಸಭೆಯನ್ನು ನಿಯಮಾನುಸಾರ ನಿರ್ವಹಿಸದೆ ಮೂಕ ಪ್ರೇಕ್ಷಕರಾಗಿದ್ದ ಕಾರ್ಯ ನಿರ್ವಹಣಾಧಿಕಾರಿ ಅವರನ್ನು ತಕ್ಷಣ ಅಮಾನತು ಮಾಡಬೇಕೆಂದು ಚಂದ್ರಕಲಾ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುನಿಲ್ ಹಾಗೂ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.