ಕುಶಾಲನಗರ, ನ. 11: ಸರಕಾರಿ ಕಾರ್ಯಕ್ರಮ ಸಂದರ್ಭ ಅಶ್ಲೀಲ ಚಿತ್ರ ವೀಕ್ಷಣೆ ನಡೆಸಿದ ಆರೋಪ ಹೊತ್ತಿರುವ ಸಚಿವ ತನ್ವೀರ್ ಸೇಠ್ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಘಟಕದಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಸೋಮವಾರಪೇಟೆ ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ ನೇತೃತ್ವದಲ್ಲಿ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು ಸಚಿವ ತನ್ವೀರ್ ಸೇಠ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಸಚಿವ ತನ್ವೀರ್ ಸೇಠ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ರಾಜ್ಯದ ಶಿಕ್ಷಣ ಸಚಿವರಾಗಿರುವ ತನ್ವೀರ್ ಸೇಠ್ ಸರಕಾರಿ ಕಾರ್ಯಕ್ರಮ ಸಂದರ್ಭ ಅರೆನಗ್ನ ಚಿತ್ರಣ ವೀಕ್ಷಣೆ ನಡೆಸಿರುವದು ಅತ್ಯಂತ ಕೀಳುಮಟ್ಟದ ವಿಚಾರವಾಗಿದ್ದು ಕೂಡಲೇ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಂದ ಕೂಡಲೇ ರಾಜೀನಾಮೆ ಪಡೆಯಬೇಕಿದೆ. ತಪ್ಪಿದಲ್ಲಿ ಪಕ್ಷದ ವತಿಯಿಂದ ಹೋರಾಟ ಕೈಗೊಳ್ಳ ಲಾಗುವದು ಎಂದು ಎಚ್ಚರಿಸಿದರು.
ಪ್ರತಿಭಟನೆ ಸಂದರ್ಭ ಬಿಜೆಪಿ ನಗರ ಘಟಕ ಅಧ್ಯಕ್ಷ ಕೆ.ಜಿ. ಮನು, ಯುವ ಮೋರ್ಚಾ ನಗರಾಧ್ಯಕ್ಷ ಡಿ.ಕೆ. ಚಂದ್ರಶೇಖರ್, ಕಾರ್ಯದರ್ಶಿ ನಿಡ್ಯಮಲೆ ದಿನೇಶ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಧುಸೂದನ್, ಪಕ್ಷದ ಪ್ರಮುಖರಾದ ಜಿ.ಎಲ್.ನಾಗರಾಜ್, ಭಾಸ್ಕರ್ ನಾಯಕ್,
ಎಂ.ವಿ.ನಾರಾಯಣ, ಅನುದೀಪ್, ಮಹೇಂದ್ರ, ಹೆಚ್.ಇ. ದರ್ಶನ್, ಶಿವರಾಜ್, ಹೆಚ್.ಎನ್. ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.