ಮಡಿಕೇರಿ, ಜ. 22: ಕ್ರಿಕೆಟ್ ಜಾಗದ ಸಮಸ್ಯೆಯನ್ನು ಖುದ್ದು ಭೇಟಿ ನೀಡಿ ಬಗೆಹರಿಸುವದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನಿಡಿದ್ದಾರೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕ ಪೃಥ್ವಿ ದೇವಯ್ಯ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೆಮಾಡುವಿನಲ್ಲಿ ಕರ್ನಾಟಕ

(ಮೊದಲ ಪುಟದಿಂದ) ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸ್ಟೇಡಿಯಂ ನಿರ್ಮಾಣ ಮಾಡಲು 12.70 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ. ಸಂಸ್ಥೆಯ ಹೆಸರಿನಲ್ಲಿ ಆರ್.ಟಿ.ಸಿ. ಕೂಡ ದೊರೆತಿದೆ. ಹೀಗಿದ್ದರೂ, ಕೆಲವರು ಅಲ್ಲಿ ಸ್ಮಶಾನ ಜಾಗ ಒಳಗೊಂಡಿದೆ ಎಂದು ಅಪಸ್ವರ ಎತ್ತಿದ್ದಾರೆ. ಸ್ಮಶಾನಕ್ಕಾಗಿ ವಾಟೆಕಾಡು ಗ್ರಾಮದಲ್ಲಿ ಜಾಗ ನೀಡಲಾಗಿದೆ. ಆದರೂ ಅಪಸ್ವರ ಖಂಡನೀಯ. ಈ ಬಗ್ಗೆ ಸಮಸ್ಯೆ ಬಗೆಹರಿಸಿಕೊಡುವದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಾ. 25ರಂದು ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಸಮಸ್ಯೆ ಹೀಗೆಯೇ ಮುಂದುವರೆದಲ್ಲಿ ಅಧಿವೇಶನದಲ್ಲಿ ಚರ್ಚಿಸುವದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಹೊದ್ದೂರು ಗ್ರಾ.ಪಂ. ಸದಸ್ಯರು ಹಾಗೂ ಜಿಲ್ಲೆಯ ವಿವಿಧ ಸಂಘ - ಸಂಸ್ಥೆಗಳು ಜಿಲ್ಲೆಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಬಗ್ಗೆ ಆಸಕ್ತಿ ತಳೆದಿದ್ದಾರೆ. ಇಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ಹಾಗೂ ಹೋರಾಟಕ್ಕೂ ಬರುವದಾಗಿ ತಿಳಿಸಿದ್ದಾರೆ ಎಂದು ಪೃಥ್ವಿ ದೇವಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.