ಮಡಿಕೇರಿ, ಆ. 7: ವ್ಯಕ್ತಿ ಎಷ್ಟೆ ಎತ್ತರಕ್ಕೆ ಬೆಳೆಯಲಿ, ಸಾಧನೆ - ಸ್ಥಾನಮಾನ ಹೊಂದಲಿ, ಬಾಲ್ಯದ ಸ್ನೇಹಾಚಾರವನ್ನು ಮರೆಯಬಾರದು. ಗೆಳೆತನದ ಮಹತ್ವ ಬಲು ಹಿರಿದು ಎಂಬದನ್ನು ರಾಜ್ಯದ ಕೃಷಿ ಸಚಿವ, ಯುವ ಮಂತ್ರಿ ಕೃಷ್ಣಭೈರೇಗೌಡ ಅವರು ನಿರೂಪಿಸಿದ್ದಾರೆ.ಇಂದು ಸ್ನೇಹಿತರ ದಿನ.. ಹ್ಯಾಪಿ ಫ್ರೆಂಡ್ಶಿಪ್ ಡೇ ಎಂಬ ಹತ್ತು ಹಲವು ಸಂದೇಶಗಳನ್ನು ಹೊತ್ತ ಮೆಸೇಜ್ಗಳು, ವಾಟ್ಸಾಪ್, ಫೇಸ್ಬುಕ್ನಂತಹ ಸಾಮಾಜಿಕ ತಾಣಗಳಲ್ಲಿ ಹರಿದಾಡಿವೆ. ಇವೆಲ್ಲವೂ ಆಧುನಿಕ ತಂತ್ರಜ್ಞಾನದ ಮೂಲಕವಷ್ಟೇ. ಆದರೆ ಕೃಷಿ ಸಚಿವ ಕೃಷ್ಣ ಭೈರೇಗೌಡರು ಕೆಲದಿನದ ಹಿಂದೆ ಫ್ರೆಂಡ್ಶಿಪ್ಡೇಗೆ ಪೂರಕವೆಂಬಂತೆ ಕೊಡಗಿನ ತಮ್ಮ ಕಾಲೇಜು ಸಹಪಾಠಿಯ ಮನೆಯಲ್ಲಿ ಸ್ನೇಹಿತರು- ಕುಟುಂಬಸ್ಥರ ಸಮ್ಮಿಲನದಲ್ಲಿ ಭಾಗಿಯಾಗಿದ್ದರು. ಸ್ನೇಹಾಚಾರದಂತೆ ಇವರು ಆಗಮಿಸಿದ್ದರೂ ತೊಡಗಿಸಿಕೊಂಡಿದ್ದ ಪರಿ ವಿಭಿನ್ನವಾಗಿತ್ತು.
ಇದು ನಡೆದಿದ್ದು ಕರಡ ಗ್ರಾಮದಲ್ಲಿ ಕರಡದ ನಿವಾಸಿ ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡಂಡ ಎಂ. ಕುಟ್ಟಪ್ಪ ಅವರ ಪುತ್ರ ಬೋಪಣ್ಣ ಹಾಗೂ ಕೃಷಿ ಸಚಿವ ಭೈರೇಗೌಡ ಅವರು ಕಾಲೇಜು ಸ್ನೇಹಿತರು. ಈಗಲೂ ಇವರ ಸ್ನೇಹಾಚಾರ ಮುಂದುವರಿದಿದೆ. ಬೋಪಣ್ಣ ಅವರು ತಮ್ಮ ಆಪ್ತರು ಹಾಗೂ ಸಂಬಂಧಿಕರಿಗೆ ಸ್ನೇಹಕೂಟವೊಂದನ್ನು ಆಯೋಜಿಸುತ್ತಿ ದ್ದಾರೆ. ಈ ಬಾರಿಯ ಕೂಟ ಕೃಷಿ ಸಚಿವರ ಆಗಮನದಿಂದ ವಿಶೇಷ ವಾಗಿತ್ತು. ಕೊಡಗಿನ ಸಾಂಪ್ರದಾಯಿಕ ನಾಟಿ ಓಟದಂತಹ ಚಟುವಟಿಕೆಯೂ ಈ ಸಂದರ್ಭ ನಡೆಯಿತು.
ಸ್ವತಃ ಕೃಷಿ ಸಚಿವರೂ ಪ್ಯಾಂಟ್ ಮಡಚಿ ಕೆಸರುಗದ್ದೆಗೆ ಇಳಿದಿದ್ದರು. ಗದ್ದೆಯಲ್ಲಿ ನಾಟಿ ನೆಡುವ ಕೆಲಸದಲ್ಲೂ ತೊಡಗಿಸಿಕೊಂಡ ಅವರು ಬಳಿಕ ನಾಟಿ ಓಟದಲ್ಲೂ ಭಾಗಿಯಾಗಿದ್ದರು. ಇವರ ಇತರ ಸ್ನೇಹಿತರು, ಸಂಬಂಧಿಕರೂ ಗದ್ದೆಗೆ ಇಳಿದು ಈ ಕಾರ್ಯಕ್ಕೆ ಸಾಥ್ ನೀಡಿದರು. ಸುಮಾರು 100 ಮಂದಿ ಆಪ್ತರು ಸೇರಿ ನಡೆದ ಕಾರ್ಯಕ್ರಮ ಇದಾಗಿತ್ತು. ಕೆಸರಿನಾಟದ ಬಳಿಕ ಕೆರೆಯಲ್ಲಿ ಈಜಾಡಿದ ಕೃಷ್ಣ ಭೈರೇಗೌಡರು ಸ್ನೇಹಿತನ
ಮನೆಯ ಭೇಟಿಯನ್ನು ಸ್ಮರಣೀಯವಾಗಿಸಿಕೊಂಡರಲ್ಲದೆ ಇತರರಿಗೂ ಉತ್ತೇಜನ ನೀಡಿದರು.
ಸಂಪೂರ್ಣವಾಗಿ ಇದು ಖಾಸಗಿ ಭೇಟಿ ಹಾಗೂ ಖಾಸಗಿ ಕಾರ್ಯಕ್ರಮವಾಗಿತ್ತು. ಕೃಷಿ ಇಲಾಖೆ ಅಥವಾ ಅಧಿಕಾರಿಗಳ, ಜಿಲ್ಲಾಡಳಿತದ ಯಾವದೇ ಪಾತ್ರ ಇಲ್ಲಿರಲಿಲ್ಲ. ಕೇವಲ ಇಲಾಖಾಧಿಕಾರಿಗಳು ಜೌಪಚಾರಿಕ ವಾಗಿ ಸಚಿವರಿಗೆ ಸ್ವಾಗತ ಕೋರಿದ್ದು, ಹೊರತು ಪಡಿಸಿದರೆ, ಎಲ್ಲವೂ ಖಾಸಗಿ ಕಾರ್ಯಕ್ರಮವಾಗಿತ್ತು. ಬೋಪಣ್ಣ ಅವರ ಗದ್ದೆಯಲ್ಲಿ ಈ ಹಿಂದಿನಿಂದಲೇ ಈ ಸಾಂಪ್ರದಾಯಿಕ ಪದ್ಧತಿ ನಡೆದುಕೊಂಡು ಬರುತ್ತಿದ್ದು, ಈ ಬಾರಿ ವಿಶೇಷ ಅತಿಥಿಯ ಆಗಮನದಿಂದ ವಿಭಿನ್ನವಾಗಿ ನಡೆದಿದೆ.
ಸಂಪ್ರದಾಯ ಮುಂದುವರಿಕೆ
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಪಾಂಡಂಡ ಬೋಪಣ್ಣ ಅವರು ಈ ಹಿಂದಿನಿಂದ ತಮ್ಮ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಓಟ ನಡೆದುಕೊಂಡು ಬರುತ್ತಿತ್ತು. ಆದರೆ ಕೆಲವು ವರ್ಷದಿಂದ ಇದು ನಿಂತುಹೋಗಿದ್ದು, ಕಳೆದ ನಾಲ್ಕು ವರ್ಷದಿಂದ ಮರು ಚಾಲನೆ ನೀಡಿರುವದಾಗಿ ಹೇಳಿದರು. ಜಿಲ್ಲೆಯಲ್ಲಿ ಕೃಷಿ ಈ ಹಿಂದಿನ ವೈಭವಕ್ಕೆ ಮರಳಬೇಕಿದೆ ಇದಕ್ಕೆ ಉತ್ತೇಜನಕಾರಿಯಾಗಲಿ ಎಂದು ತಮ್ಮ ಕಾಲೇಜು ಸ್ನೇಹಿತರಾಗಿರುವ ಕೃಷ್ಣಭೈರೇಗೌಡ ಅವರನ್ನು ಆಹ್ವಾನಿಸಿದ್ದು, ಅವರು ಉತ್ಸುಕತೆಯಿಂದ ಪಾಲ್ಗೊಂಡಿದ್ದರೆಂದು ತಿಳಿಸಿದರು. ಕೃಷಿ ಸಚಿವರಿಂದ ಕೊಡಗಿನ ಕೃಷಿಕರಿಗೆ ನೆರವಾಗಲಿ ಎಂಬ ಸದುದ್ದೇಶವೂ ಇದರಲ್ಲಿದೆ. ಮುಂದಿನ ವರ್ಷ ಇನ್ನಷ್ಟು ಪರಿಣಾಮಕಾರಿಯಾಗುವಂತೆ ಕಾರ್ಯಕ್ರಮ ಸಂಘಟಿಸುವ ಚಿಂತನೆ ಇದೆ ಎಂದು ಬೋಪಣ್ಣ ಹೇಳಿದರು.