ಬೆಂಗಳೂರು, ಸೆ.26 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಭರ್ತಿಯಾಗಿದೆ. ಕೆ.ಜೆ.ಜಾರ್ಜ್ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ರಾಜಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾರ್ಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಿ.ಆರ್.ವಾಲಾ ಜಾರ್ಜ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಕೆ.ಜೆ ಜಾರ್ಜ್, ಸತ್ಯಕ್ಕೆ ಜಯವಾಗಿದೆ. ನಾನು ಆರೋಪ ಮುಕ್ತನಾಗಿದ್ದೇನೆ. ಸಿಎಂ ಮತ್ತೆ ನನ್ನನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಂಡಿದ್ದಾರೆ ಅಂದ್ರು. ಸಿಎಂ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್ ಅವರಿಗೆ ಮತ್ತೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡಲಿದ್ದಾರೆ ಎನ್ನಲಾಗಿದೆ. ಜಾರ್ಜ್ ಪ್ರಮಾಣ ವಚನಕ್ಕೆ ಗಣ್ಯರ ದಂಡೇ ಆಗಮಿಸಿತ್ತು. ಸಚಿವರಾದ ಪರಮೇಶ್ವರ್, ರಾಮ ಲಿಂಗಾರೆಡ್ಡಿ, ಎಚ್ಎಸ್ ಮಹದೇವ ಪ್ರಸಾದ್, ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಯುಟಿ ಖಾದರ್, ಸಂಸದ ಕೆಎಚ್ ಮುನಿಯಪ್ಪ, ಶಾಸಕರಾದ ಮುನಿರತ್ನ, ಎಸ್ಟಿ ಸೋಮಶೇಖರ್, ರಿಜ್ವಾನ್ ಅರ್ಷದ್, ಗೋವಿಂದ ರಾಜು, ಅರ್ವಿ ವೆಂಕಟೇಶ್, ಎನ್.ಎ. ಹ್ಯಾರಿಸ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.