ಮಡಿಕೇರಿ, ಅ.19 : ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸಂಪಾಜೆ ನಾಡ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
94ಸಿ ನಡಿ ಅರ್ಹರಿಗೆ ಹಕ್ಕು ಪತ್ರ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಮಾಣ ಪತ್ರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅವರು ಸಾರ್ವಜನಿಕರು ಹಲವು ಕಾರ್ಯಗಳಿಗಾಗಿ ನಾಡ ಕಚೇರಿಗೆ ಭೇಟಿ ನೀಡುತ್ತಾರೆ. ಜಾತಿ, ಆದಾಯ, ಆರ್.ಟಿ.ಸಿ ಮತ್ತಿತರ ಕಾರ್ಯಗಳಿಗೆ ಆಗಮಿಸಲಿದ್ದು, ಸಲ್ಲಿಕೆಯಾದ ಅರ್ಜಿಗಳಿಗೆ ಕಾಲಮಿತಿಯೊಳಗೆ ಅಗತ್ಯ ಪ್ರಮಾಣ ಪತ್ರಗಳನ್ನು ನೀಡುವದು ಸೇರಿದಂತೆ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಲ್ಲಿ ಸಾರ್ವಜನಿಕರು ಸ್ಮರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ ನಾಡಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸುವಲ್ಲಿ ಮುಂದಾಗಬೇಕು ಎಂದು ಹೇಳಿದರು. ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಮತ್ತು ಗ್ರಾಮಸ್ಥರು ರಸ್ತೆ ಸರಿಪಡಿಸು ವದು, ಸೇತುವೆ ನಿರ್ಮಿಸಲು ಅಗತ್ಯ ಸಹಕಾರ ನೀಡುವದು. ಜೊತೆಗೆ ಕುಡಿಯುವ ನೀರು ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವದು ಸೇರಿದಂತೆ ಹಲವು ಅಹವಾಲು ಸಲ್ಲಿಸಿದರು. ತಹಶೀಲ್ದಾರ್ ಕುಸುಮ, ಕಂದಾಯ ನಿರೀಕ್ಷಕ ವಿನು ಇತರರು ಇದ್ದರು.