ಮಡಿಕೇರಿ, ಜು. 30: ಜಿಲ್ಲೆಯ ಹಿರಿಯ ಸಾಹಿತಿ ಎದುರ್ಕಳ ಶಂಕರನಾರಾಯಣ ಭಟ್ ನಿಧನಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂತಾಪ ಸೂಚಿಸಲಾಯಿತು.

ಕೋಟೆ ಆವರಣದಲ್ಲಿನ ಕಸಾಪ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪರಿಷತ್ ಪದಾಧಿಕಾರಿಗಳು ಶಂಕರನಾರಾಯಣ ಭಟ್ಟರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಭಟ್ಟರ ಸಾಹಿತ್ಯ ಸಾಧನೆ ಬಗ್ಗೆ ಪ್ರಮುಖರು ಸ್ಮರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕೊಡಗಿನ ಸಾಹಿತ್ಯ ಲೋಕದಲ್ಲಿ ಶಂಕರನಾರಾಯಣ ಭಟ್ಟರು ವಿಭಿನ್ನವಾಗಿ ನಿಲ್ಲುತ್ತಾರೆ. ಶಾಂತ ಸ್ವಭಾವಿಯಾಗಿದ್ದರು. ಇತ್ತೀಚೆಗೆ ಅವರ ಮನೆಗೆ ತೆರಳಿ ಕಸಾಪದಿಂದ ಸನ್ಮಾನಿಸಲಾಗಿತ್ತು ಎಂದು ನೆನೆಸಿಕೊಂಡರು.

ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ರಮೇಶ್ ಮಾತನಾಡಿ, ಎಲ್ಲರೊಂದಿಗೆ ಆತ್ಮೀಯರಾಗಿರುತ್ತಿದ್ದರು. ಹಲವು ಬಾರಿ ತಮ್ಮ ಪುಸ್ತಕಗಳನ್ನು ಉಚಿತವಾಗಿ ನೀಡಿದ್ದರು ಎಂದು ಸ್ಮರಿಸಿಕೊಂಡರು.

ಸದಸ್ಯ ಪ್ರಶಾಂತ್ ಮಾತನಾಡಿ, ಕಾವೇರಿ ನದಿ ಬಗ್ಗೆ ಅವರಿಗೆ ಅಪಾರ ಕಾಳಜಿಯಿತ್ತು. ಕಾವೇರಿ ವೈಭವ ಕೃತಿಯಲ್ಲಿ ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗೆ ತಾವು ಪಾದಯಾತ್ರೆ ಕೈಗೊಂಡ ಕ್ಷಣಗಳನ್ನು ಅದ್ಭುತವಾಗಿ ವಿವರಿಸಿದ್ದಾರೆ. ಪ್ರತಿಯೊಬ್ಬರು ಅವರ ಕೃತಿಗಳ ಅಧ್ಯಯನ ಮಾಡಬೇಕೆಂದರು.

ಮಡಿಕೇರಿ ತಾಲೂಕು ಕಾರ್ಯದರ್ಶಿ ಕೆ.ಸಿ. ದಯಾನಂದ, ಮಾಧ್ಯಮ ಕಾರ್ಯದರ್ಶಿ ಕಿಶೋರ್ ರೈ ಕತ್ತಲೆಕಾಡು, ಸದಸ್ಯರಾದ ಚುಮ್ಮಿ ದೇವಯ್ಯ, ಶ್ರೀಧರ್ ಹೂವಲ್ಲಿ, ರಾಜು ಮತ್ತಿತರರಿದ್ದರು.