ಸೋಮವಾರಪೇಟೆ, ಡಿ. 7: ಸಂಘಟನೆಯ ಮೂಲಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾದರೆ ಮಾತ್ರ ಪರಿಹಾರ ಕಾಣಲು ಸಾಧ್ಯವಿದ್ದು, ಎಲ್ಲಾ ಕಾಫಿ ಬೆಳೆಗಾರರು ತಾಲೂಕು ಕಾಫಿ ಬೆಳೆಗಾರರ ಸಂಘದೊಂದಿಗೆ ಕೈ ಜೋಡಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮನವಿ ಮಾಡಿದರು.

ತಾಲೂಕು ಬೆಳೆಗಾರರ ಸಂಘದ ವತಿಯಿಂದ ಮೂವತ್ತೊಕ್ಲು ಗ್ರಾಮದಲ್ಲಿ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಒಂದಲ್ಲ ಒಂದು ಸಮಸ್ಯೆಗಳಲ್ಲಿ ಸಿಲುಕುವ ಕಾಫಿ ಬೆಳೆಗಾರರು ಪ್ರತಿವರ್ಷ ಬೆಲೆ ಅಥವಾ ಬೆಳೆಯ ಮೂಲಕ ನಷ್ಟವನ್ನನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕಾಫಿ ಬೆಳೆಗಾರರ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಾಲೂಕು ಕಾಫಿ ಬೆಳೆಗಾರರ ಸಂಘ ಶ್ರಮಿಸುತ್ತಿದ್ದು, ಕಾಫಿ ಬೆಳೆಗಾರರು ಸಂಘದಲ್ಲಿ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸಂಘದೊಂದಿಗೆ ಕೈಜೋಡಿಸಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ, ಸಂಘವು ರಾಜ್ಯ ಬೆಳೆಗಾರರ ಒಕ್ಕೂಟದೊಂದಿಗೆ ಕೈಜೋಡಿಸುತ್ತಾ ಕಳೆದ ಹಲವಾರು ವರ್ಷಗಳಿಂದ ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತಾ ಬಂದಿದೆ. ಇನ್ನೂ ಹಲವಾರು ಜ್ವಲಂತ ಸಮಸ್ಯೆಗಳಿದ್ದು ಪರಿಹಾರಕ್ಕಾಗಿ ಹೋರಾಟ ರೂಪಿಸಬೇಕಿದ್ದು, ಸಂಘದ ಸದಸ್ಯತ್ವ ಪಡೆದುಕೊಂಡು ಸಂಘದೊಂದಿಗೆ ಸಹಕರಿಸಿ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಲವ, ಸಂಘದ ನಿರ್ದೇಶಕ ಬಿ.ಎಸ್. ಅನಂತರಾಮ್, ಕಾರ್ಯದರ್ಶಿ ಎಸ್.ಸಿ. ಪ್ರಕಾಶ್, ಮೂವತ್ತೊಕ್ಲು ಗ್ರಾಮಾಧ್ಯಕ್ಷ ನಾಗಂಡ ಸಜ್ಜಿ ಕಾಳಪ್ಪ ಉಪಸ್ಥಿತರಿದ್ದರು.