ಮಡಿಕೇರಿ, ಆ. 6 : ಕೊಡಗು ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿ ಗಳಿಂದಲೇ ಮರಗಳು ನಾಶ ವಾಗುತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ಕೆಲವು ಹೊಟ್ಟೆ ಪಾಡಿನ ಸಂಘಟನೆಗಳು ಬೆಂಬಲ ನೀಡುತ್ತಿವೆ ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಚಾರ ವಿರೋಧಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಬಬ್ಬಿರ ಸರಸ್ವತಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಶಾಲನಗರದ ಭಾರ್ಗವಿ ಮಹಿಳಾ ಸಂಘಟನೆ ತಮ್ಮ ವಿರುದ್ಧ ನಿರಾಧಾರ ಆರೋಪ ಮಾಡಿದ್ದು, ಭ್ರಷ್ಟ ಅಧಿಕಾರಿಗಳಿಗೆ ಈ ಸಂಘಟನೆ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದರು.

ಇತ್ತೀಚೆಗೆ ಕುಶಾಲನಗರದಲ್ಲಿ ನಡೆದ ತೇಗದ ಮರ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆ ತಮ್ಮ ಬಳಿಯಿದ್ದು, ಅಧಿಕಾರಿಗಳ ಲೋಪಕ್ಕೆ ಸಾಕ್ಷ್ಯಾಧಾರಗಳಿವೆ. ಭಾರ್ಗವಿ ಮಹಿಳಾ ಸಂಘಟನೆ ಬಳಿ ಸೂಕ್ತ ದಾಖಲೆಗಳಿದ್ದಲ್ಲಿ ಬaಹಿರಂಗ ಚರ್ಚೆಗೆ ಬರಲಿ ಎಂದು ಬಬ್ಬಿರ ಸರಸ್ವತಿ ಸವಾಲು ಹಾಕಿದರು. ತೇಗದ ಮರದ ಅಕ್ರಮ ಸಾಗಾಟದ ಬಗ್ಗೆ ಮಾನವ ಹಕ್ಕುಗಳು ಹಾಗೂ ಭ್ರಷ್ಟ್ಟಾಚಾರ ವಿರೋಧಿ ಸಂಸ್ಥೆಯೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅಕ್ರಮವನ್ನು ಬಯಲಿಗೆಳೆದಿದೆ. ರಸ್ತೆಯ ಬದಿಯಲ್ಲೇ ನಿಯಮ ಬಾಹಿರವಾಗಿ ತೇಗದ ಮರಗಳನ್ನು ಕತ್ತರಿಸಿ ಸಾಗಿಸಿದ ಸಾಕ್ಷಿ ಇದ್ದರೂ ಅರಣ್ಯ ಇಲಾಖೆ ಯಾರ ವಿರುದ್ಧವೂ ಕ್ರಮ ಕೈಗೊಂಡಿರಲಿಲ್ಲ. ನಮ್ಮ ಸಂಸ್ಥೆ ದೂರು ನೀಡಿದ ನಂತರ ಮರದ ಬುಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮರದ ಮಿಲ್‍ನಲ್ಲಿದ್ದ ತೇಗದ ಮರದ ನಾಟಗಳನ್ನು ವಶಪಡಿಸಿ ಕೊಳ್ಳಲಾಗಿದೆಯೇ ಹೊರತು ತಪ್ಪಿತಸ್ಥರ ವಿರುದ್ಧ ಯಾವದೇ ಕ್ರಮ ಕೈಗೊಂಡಿಲ್ಲ. ಇದರಿಂದ ಅರಣ್ಯ ಅಧಿಕಾರಿಗಳ ಭ್ರಷ್ಟ ವ್ಯವಸ್ಥೆ ಬಯಲಾಗಿದೆ ಎಂದು ಬಬ್ಬಿರ ಸರಸ್ವತಿ ಆರೋಪಿಸಿದರು.

ದಕ್ಷ ಅಧಿಕಾರಿಗಳಿಗೆ ನಮ್ಮ ಸಂಸ್ಥೆಯ ಬೆಂಬಲವಿದೆ. ಆದರೆ ಹಣ ನೀಡಿ ಪ್ರಶಸ್ತಿ ಪಡೆದು ಪ್ರಾಮಾಣಿಕರಂತೆ ನಟಿಸುವವರಿಗೆ ಬೆಂಬಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕುಶಾಲನಗರದ ಭಾರ್ಗವಿ ಮಹಿಳಾ ಸಂಘಟನೆ ಹೊಟ್ಟೆ ಪಾಡಿಗಾಗಿ ಹುಟ್ಟಿಕೊಂಡಿದೆ ಎಂದು ಆರೋಪಿಸಿದ ಬಬ್ಬಿರ ಸರಸ್ವತಿ ತಮ್ಮ ವಿರುದ್ಧ ಹೋರಾಟ ನಡೆಸುವದಾದರೆ ನಡೆಸಲಿ ಎಂದು ಸವಾಲು ಹಾಕಿದರು. ಕಾರ್ಯಕರ್ತ ಗಣೇಶ್ ಮಾತನಾಡಿ ಅರಣ್ಯ ಅಧಿಕಾರಿಗಳು ಸಣ್ಣ ಪ್ರಕರಣಗಳಲ್ಲಿ ಬಡವರನ್ನು ಬಂಧಿಸಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಾರೆ. ಆದರೆ ತೇಗದ ಮರ ಮುಟ್ಟುಗೋಲು ಪ್ರಕರಣವನ್ನು ಬಹಿರಂಗ ಪಡಿಸದೇ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು. ಹಣದ ಆಮಿಷ ಮತ್ತು ರಾಜಕೀಯ ಒತ್ತಡಕ್ಕೆ ಮಣಿಯುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು. ಸಂಘಟನೆಗಳು ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿದು ಹೇಳಿಕೆಯನ್ನು ನೀಡಬೇಕೆಂದು ಗಣೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯ ಕರ್ತರಾದ ಇಬ್ರಾಹಿಂ ಹಾಗೂ ತಮ್ಮಯ್ಯ ಉಪಸ್ಥಿತರಿದ್ದರು.