ಶ್ರೀಮಂಗಲ, ಸೆ. 22: ಬ್ರಹ್ಮಗಿರಿ ವಲಯ ವನ್ಯಜೀವಿ ವಿಭಾಗದ 181.29 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕರಾಗಿ ದಿನಗೂಲಿ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮಂಗಲ ವಲಯ ಅರಣ್ಯ ಹಾಗೂ ಮಾಕುಟ್ಟ ವಲಯ ಅರಣ್ಯ ವ್ಯಾಪ್ತಿಯ ಸುಮಾರು 48 ಸಿಬ್ಬಂದಿಗಳಿಗೆ ಅರಣ್ಯ ಇಲಾಖೆ ಕಳೆದ 7 ತಿಂಗಳಿನಿಂದ ವೇತನ ಪಾವತಿಸಿಲ್ಲ. ಇದರಿಂದ ಆರ್ಥಿಕವಾಗಿ ಹಿಂದುಳಿದ ಸಿಬ್ಬಂದಿಗಳು ಸಂಕಷ್ಟದಿಂದ ದಿನದೂಡುವಂತಾಗಿದೆ. ಕಳೆದ ಹಲವು ವರ್ಷದಿಂದ ಹಲವಾರು ತಿಂಗಳವರೆಗೂ ವೇತನ ಬಾಕಿ ಉಳಿಸಿಕೊಂಡು ಸಮಸ್ಯೆ ಮರುಕಳಿಸುತ್ತಿದ್ದು, ತಮ್ಮ ಅಡಿಯಲ್ಲಿ ಹಾಗೂ ಅರಣ್ಯ ಇಲಾಖೆಗೆ ಅನಿವಾರ್ಯವಾಗಿರುವ ದಿನಗೂಲಿ ನೌಕರರ ಬಗ್ಗೆ ಅರಣ್ಯಾಧಿಕಾರಿಗಳು ಕಾಳಜಿ ತೋರಿಸದೆ ಸಮಸ್ಯೆ ಉಲ್ಭಣಿಸುತ್ತಿದೆ.
ಬ್ರಹ್ಮಗಿರಿ ವಲಯ ವನ್ಯಜೀವಿ ವಿಭಾಗ ವ್ಯಾಪ್ತಿಗೆ ಶ್ರೀಮಂಗಲ ವಲಯದ 12,941, ಮಾಕುಟ್ಟ ವ್ಯಾಪ್ತಿಗೆ 5188 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಳೆದ 20 ವರ್ಷದಿಂದಲೂ ಸುಮಾರು 48 ಸಿಬ್ಬಂದಿಗಳನ್ನು ದಿನಗೂಲಿ ಆಧಾರದಲ್ಲಿ ಅರಣ್ಯ ಇಲಾಖೆ ನೇಮಿಸಿಕೊಂಡಿದೆ. ಇತ್ತ 7 ತಿಂಗಳಿನಿಂದ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಸಿಬ್ಬಂದಿಗಳಿಗೆ ವೇತನ ನೀಡದೆ ಇರುವ ಅರಣ್ಯ ಇಲಾಖೆ, ತನ್ನ ಅಧಿಕಾರಿಗಳಿಗೆ ಪ್ರತಿ ತಿಂಗಳು ತಪ್ಪದೆ ವೇತನ ಎಣಿಸಿಕೊಳ್ಳಲು ಹಣದ ಕೊರತೆ ಕಾಡುತ್ತಿಲ್ಲ!
ಸರಕಾರದ ಬಳಿ ಹಣ ಇಲ್ಲವೆಂದಾದರೆ ಬ್ರಹ್ಮಗಿರಿ ವಲಯ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ (ಶ್ರೀಮಂಗಲ ಸಮೀಪ) ಲಕ್ಷ್ಮಣ ತೀರ್ಥ ನದಿ ಉಗಮ ಸ್ಥಾನದ ಇರ್ಪು ಜಲಪಾತ ವೀಕ್ಷಣೆಗೆ ಪ್ರವಾಸಿಗರಿಂದ ಅರಣ್ಯ ಇಲಾಖೆ ವಿಧಿಸುವ ಶುಲ್ಕ, ಟ್ರೆಕ್ಕಿಂಗ್ ಶುಲ್ಕ ಇತ್ಯಾದಿಗಳಿಂದ ಅರಣ್ಯ ಇಲಾಖೆಗೆ ಸಂಗ್ರಹವಾಗುತ್ತಿದೆ. ತಮ್ಮ ಕೈಯಾರೆ ಪ್ರವಾಸಿಗರಿಂದ ಲಕ್ಷಾಂತರ ಶುಲ್ಕ ಸಂಗ್ರಹಿಸಿ ಇಲಾಖೆಗೆ ನೀಡುತ್ತಿದ್ದರೂ, ಕಳೆದ 7 ತಿಂಗಳಿನಿಂದ ವೇತನವಿಲ್ಲದೆ ಬರಿಗೈಯಲ್ಲಿ ಸಿಬ್ಬಂದಿಗಳು ತೆರಳುತ್ತಿದ್ದಾರೆ. ಸಂಕಷ್ಟದಲ್ಲಿರುವ ದಿನಗೂಲಿ ನೌಕರರಿಗೆ ಈ ಹಣವನ್ನು ಬಳಸಿಕೊಂಡು ವೇತನ ನೀಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬಹುದು.
ಈ ವ್ಯಾಪ್ತಿಗೆ ಸಂಬಂಧ ಪಡುವ ಆರ್.ಎಫ್.ಒ, ಎ.ಸಿ.ಎಫ್. ಡಿ.ಸಿ.ಎಫ್, ಸಿ.ಸಿ.ಎಫ್ ಅಧಿಕಾರಗಳು ಒಂದೇ ಜಾಗದಲ್ಲಿ ಕರ್ತವ್ಯದಲ್ಲಿ ಒಂದೆರೆಡು ವರ್ಷ ಇರುತ್ತಾರೆ. ಇಲ್ಲಿಂದ ಇನ್ನೊಂದೆಡೆಗೆ ವರ್ಗವಾಗುತ್ತಾರೆ. ಆದರೆ ದಿನಗೂಲಿ ನೌಕರರು ಕಳೆದ 15-20 ವರ್ಷಗಳಿಂದ ಈ ಅರಣ್ಯ ವ್ಯಾಪ್ತಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಬ್ರಹ್ಮಗಿರಿ ವಲಯ ವನ್ಯಜೀವಿ ವಿಭಾಗ ಭೌಗೋಳಿಕ ಪ್ರದೇಶದ ಪ್ರತಿ ಹಂತದ, ನೆಲಮಟ್ಟದಲ್ಲಿ ಸಂಪೂರ್ಣ ಪರಿಜ್ಞಾನವಿದೆ. ಅರಣ್ಯ ಪ್ರದೇಶದ ಬಗ್ಗೆ ದಿನಗೂಲಿ ನೌಕರರೇ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ಅಧಿಕಾರಿಗಳು ಇಲಾಖಾ ವಾಹನದಲ್ಲಿ ಕಚೇರಿ ಹಾಗೂ ವಾಹನ ತೆರಳುವ ಅರಣ್ಯ ಪ್ರದೇಶದ ಜಾಗಗಳಿಗೆ ಹಾಗೂ ಏನಾದರೂ ಪ್ರಕರಣ ನಡೆದರೆ ಅಲ್ಲಿಗೆ ಭೇಟಿ ಕೊಡುವದು ಬಿಟ್ಟರೆ ಅರಣ್ಯ ಸಿಬ್ಬಂದಿಗಳಷ್ಟು ಮಾಹಿತಿ ಹೊಂದಿರುವದಿಲ್ಲ.
ಅರಣ್ಯದೊಳಗೆ ದಿನನಿತ್ಯ ಸಂಚರಿಸುವ, ಕಳ್ಳಬೇಟೆ ತಡೆಯುವ, ಕಾಡನ್ನು ರಕ್ಷಿಸುವ, ವನ್ಯ ಪ್ರಾಣಿಗಳು ಗ್ರಾಮಕ್ಕೆ ನುಸುಳದಂತೆ ಕಾರ್ಯಾಚರಣೆ ಸೇರಿದಂತೆ ಅದನ್ನು ತಡೆಗಟ್ಟಲು ನೆಲಮಟ್ಟದಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೆ ಅರಣ್ಯ ಪ್ರದೇಶದ ವ್ಯಾಪ್ತಿಯ ಸ್ಥಳಗಳು ಪ್ರಾಣಿಗಳ ಓಡಾಟ, ಒಳ ರಸ್ತೆಗಳು, ಕಾಲ್ನಡಿಗೆ ರಸ್ತೆಗಳ ಬಗ್ಗೆ ಪರಿಜ್ಞಾನ ಇರುವಷ್ಟು ಅಧಿಕಾರಿ ವರ್ಗಕ್ಕಿಲ್ಲ. ಆದ್ದರಿಂದ ದಿನಗೂಲಿ ನೌಕರರೇ ನಿಜವಾದ ಅರಣ್ಯ ರಕ್ಷಕರಾಗಿದ್ದಾರೆ. ಇವರಿಗೆ ವೇತನ ಪಾವತಿ ಮಾಡದೇ ಬದಲಿ ವ್ಯವಸ್ಥೆ ಮಾಡಿಕೊಳ್ಳುವ ಯಾವದೇ ಕ್ರಮ ವೈಫಲ್ಯ ಕಾಣಬಹುದು.
ಖಾತೆಗೆ ಪಾವತಿಯಾಗದ ವೇತನ: 15-20 ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರೂ ಅರಣ್ಯ ಇಲಾಖೆ ಇವರನ್ನು ಖಾಯಂಗೊಳಿಸಿಲ್ಲ. ಹಲವಾರು ವರ್ಷದ ಹಿಂದೆಯೇ ಪಿ.ಸಿ.ಸಿ.ಎಫ್. ದಿನಗೂಲಿ ನೌಕರರ ಖಾತೆಗೆ ನೇರವಾಗಿ ವೇತನ ಪಾವತಿ ಮಾಡಬೇಕೆಂದು ಆದೇಶಿಸಿದ್ದಾರೆ. ಆದರೆ ಈ ನಿಯಮ ಪಾಲನೆಯಾಗುತ್ತಿಲ್ಲ. ಆದ್ದರಿಂದ ಅರಣ್ಯಾಧಿಕಾರಿಗಳು ದಿನಗೂಲಿ ನೌಕರರಿಗೆ ಕೈಗೆ ನಗದು ವೇತನ ನೀಡುತ್ತಿದ್ದು, ಇದರಿಂದ ನೌಕರರ ಸೇವಾವಧಿ ದಾಖಲಾಗಿ ಖಾಯಂಗೊಳಿಸುವ ಪ್ರಮೇಯದಿಂದ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎನ್ನುವ ಆರೋಪ ಒಂದೆಡೆ ಕೇಳಿ ಬಂದರೆ ಇನ್ನೊಂದೆಡೆ ಸಿಬ್ಬಂದಿಗಳ ಖಾತೆಗೆ ನೇರವಾಗಿ ನಗದು ಪಾವತಿಸದೆ ಇರುವದು ವೇತನ ಪಕ್ರಿಯೆ ಪಾರದರ್ಶಕವಾಗಿ ನಡೆಯದೆ ದುರುಪಯೋಗವಾಗಿರುವ ಸಂಶಯ ಕೇಳಿ ಬಂದಿದೆ.
ಪ್ರವಾಸಿಗರಿಂದ ಲಕ್ಷಾಂತರ ಆದಾಯ: ಲಕ್ಷ್ಮಣ ತೀರ್ಥ ಉಗಮ ಸ್ಥಾನದಲ್ಲಿ ಇರುವ ಧುಮ್ಮಿಕ್ಕುವ ಜಲಪಾತದ ರಮಣೀಯ ದೃಶ್ಯವನ್ನು (ಇರ್ಪು) ನೋಡಲು ಬರುವ ಪ್ರವಾಸಿಗರಿಂದ ಅರಣ್ಯ ಇಲಾಖೆ ಶುಲ್ಕ ಪಡೆಯುತ್ತಿದ್ದು, ಪ್ರತಿ ವರ್ಷಕ್ಕೆ ಲಕ್ಷಾಂತರ ರೂ ಸಂಗ್ರಹವಾಗುತ್ತಿದೆ. ಈ ಹಣದ ಒಂದು ಭಾಗವನ್ನು ತೆಗೆದುಕೊಂಡು ದಿನಗೂಲಿ ನೌಕರರ ವೇತನ ಪಾವತಿಸಲು ಬಳಸಬಹುದಾಗಿದೆ. ಆದರೆ ಇಲಾಖಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ.