ಸೋಮವಾರಪೇಟೆ, ಜ. 16: ಪುಷ್ಪಗಿರಿ ಬೆಟ್ಟತಪ್ಪಲು ವ್ಯಾಪ್ತಿಯಲ್ಲಿನ ನಿಸರ್ಗ ರಮಣೀಯ ಸೌಂದರ್ಯವನ್ನು ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿ ರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ 58ನೇ ವರ್ಷದ ವಾರ್ಷಿಕ ಮಹಾ ರಥೋತ್ಸವ ಸಹಸ್ರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಇಂದು ವೈಭವಯುತವಾಗಿ ನೆರವೇರಿತು.
800 ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿರುವ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ 58ನೇ ವರ್ಷದ ಮಹಾ ರಥೋತ್ಸವಕ್ಕೆ ಕೊಡಗು ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಆಗಮಿಸಿ ವಿವಿಧ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಶಾಂತಳ್ಳಿ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಜರುಗುವ ಜಾತ್ರೆ ಹಾಗೂ ರಥೋತ್ಸವ ಈ ಬಾರಿಯೂ ವೈಭವಯುತವಾಗಿ ನೆರವೇರಿತು. ಕಳೆದ ತಾ.13 ರಂದು ಪ್ರಾರ್ಥನಾ ಪೂಜೆಯೊಂದಿಗೆ ವಿಧ್ಯುಕ್ತ ಚಾಲನೆಗೊಂಡಿರುವ ಪ್ರಸಕ್ತ ವರ್ಷದ ಜಾತ್ರೆಗೆ ತಾ.17 ರಂದು (ಇಂದು) ತೆರೆಬೀಳಲಿದೆ.
ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಕರುವಿನ ಹಬ್ಬ, ಗರುಡಗಂಬದಲ್ಲಿ ತುಪ್ಪದ ನಂದಾದೀಪ ಬೆಳಗುವದು, ಪುಷ್ಪಗಿರಿ ಬೆಟ್ಟದಲ್ಲಿರುವ ಪುರಾತನ ದೇವಾಲಯದಲ್ಲಿ ದೀಪೋತ್ಸವ, ಅರಸುಬಲ ಸೇವೆ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದ್ದು, ಇಂದು ಮಹಾ ರಥೋತ್ಸವ ಜರುಗಿತು.
ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ಹಾಗೂ ಶಾಂತಳ್ಳಿಯ ಬಿ.ಎ. ಗಣೇಶ್, ರಮೇಶ್ ಹೆಗ್ಡೆ, ಯಡೂರು ಸರ್ವೇಶ್, ಕುಮಾರ್, ಹಾನಗಲ್ಲು ಪ್ರಸಾದ್ ಅವರುಗಳ ನೇತೃತ್ವದ ತಂಡದವರಿಂದ ಬೆಳಗ್ಗಿನಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು. ನಿರಂತರವಾಗಿ ಅನಾದಿಕಾಲದಿಂದಲೂ ನಡೆದುಬಂದ ಪದ್ಧತಿಯ ಮೇರೆ ಕೂತಿ ನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ, ಹೊರ ಜಿಲ್ಲೆಯ ನೂರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಶಾಂತಳ್ಳಿಯ ರಥಬೀದಿಯಲ್ಲಿ ಹೊರಟ ರಥವನ್ನು ಭಕ್ತಾದಿಗಳು ದಾರಿಯ ಇಕ್ಕೆಲಗಳಲ್ಲೂ ಹರ್ಷೋ ದ್ಗಾರದೊಂದಿಗೆ ಸ್ವಾಗತಿಸಿ ದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ, ದೇವಾಲಯ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಜಿ.ಎಸ್. ರಘುಕುಮಾರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು, ಹೊರಜಿಲ್ಲೆಯ ನೂರಾರು ಮಂದಿ ಭಕ್ತಾದಿಗಳು ವಿಶೇಷ ಮಡಿವಂತಿಕೆಯಿಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ದಾನಿಗಳಾದ ಹರಪಳ್ಳಿ ರವೀಂದ್ರ, ಬೆಂಗಳೂರಿನ ರಾಮಚಂದ್ರ, ಕಲ್ಕಂದೂರಿನ ಸತೀಶ್ ಸೇರಿದಂತೆ ಇತರ ದಾನಿಗಳ ನೆರವಿನಿಂದ ಮಧ್ಯಾಹ್ನ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಂಜೆ 6 ಗಂಟೆಗೆ ‘ಮುದುಕನ ಮದುವೆ’ ಎಂಬ ಹಾಸ್ಯ ನಾಟಕ, 7 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಿತು.
ಜಾತ್ರೋತ್ಸವದ ಅಂಗವಾಗಿ ಸ್ಥಳೀಯ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾ ಮಟ್ಟದ ಪುರುಷರ ಮುಕ್ತ ಕಬಡ್ಡಿ ಮತ್ತು ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದವು. ಸ್ಥಳೀಯ ಕ್ರೀಡಾಪಟುಗಳೂ ಸೇರಿದಂತೆ ಹೊರ ಜಿಲ್ಲೆಯ ನೂರಾರು ಮಂದಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಪ್ರಸಕ್ತ ಸಾಲಿನ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ರಘುಕುಮಾರ್, ಉಪಾಧ್ಯಕ್ಷ ಕೆ.ಟಿ. ಕೃಷ್ಣಪ್ಪ, ಕಾರ್ಯದರ್ಶಿ ಪರಮೇಶ್, ಖಜಾಂಚಿ ಲಿಂಗರಾಜು, ಸಹಕಾರ್ಯದರ್ಶಿ ದಿವ್ಯಕುಮಾರ್, ಪ್ರಮುಖರಾದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ನಿರಂಜನ್ ಸೇರಿದಂತೆ ಸಮಿತಿ ಪದಾಧಿಕಾರಿ ಗಳು, ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೋತ್ಸವ ಹಾಗೂ ರಥೋತ್ಸವದಲ್ಲಿ ತೊಡಗಿಸಿ ಕೊಂಡಿದ್ದಾರೆ.