ಮಡಿಕೇರಿ, ಸೆ. 14: ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೂಲಕ ಗೆಲವು ಸಾಧಿಸಿ, ಅಧಿಕಾರ ಅನುಭವಿಸಿದರೂ ಇದೀಗ ಬಿಜೆಪಿಗೆ ಬೆಂಬಲ ನೀಡುವ ಮೂಲಕ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ನೀಚ ರಾಜಕಾರಣವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್‍ನ ಮಹಿಳಾ ಘಟಕ ಇವರಿಬ್ಬರ ರಾಜಿನಾಮೆಗೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕುಮುದಾ ಧರ್ಮಪ್ಪ ಮಹಿಳಾ ಕಾಂಗ್ರೆಸ್ ಘಟಕದ ಬಗ್ಗೆ ಟೀಕೆ ಮಾಡುವ ಯಾವದೇ ನೈತಿಕತೆ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಅವರುಗಳಿಗೆ ಇಲ್ಲವೆಂದರು. ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವ ಮೊದಲು ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದಿರುವ ಈ ಇಬ್ಬರು ಸದಸ್ಯರು ನಗರಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದರು. ನಗರಸಭೆಯಲ್ಲಿ ಮೊದಲ ಅಧಿಕಾರಾವಧಿಯ 30 ತಿಂಗಳಲ್ಲಿ ನಗರಸಭಾ ಅಧ್ಯಕ್ಷ ಸ್ಥಾನವನ್ನು ಮೊದಲ 15 ತಿಂಗಳ ಕಾಲ ಜುಲೇಕಾಬಿ ಅವರಿಗೆ ನೀಡಿ ನಂತರದ 15 ತಿಂಗಳನ್ನು ಶ್ರೀಮತಿ ಬಂಗೇರ ಅವರಿಗೆ ನೀಡಲಾಗಿದೆ.

ಕಾಂಗ್ರೆಸ್ ಪಕ್ಷ ಈ ಗೌರವದ ಸ್ಥಾನವನ್ನು ನೀಡಿದ ನಂತರ ಮತ್ತೆ ನಾನೇ ಮುಂದುವರಿಯಬೇಕು ಎನ್ನುವ ನಿಲುವು ತೆಗೆದುಕೊಳ್ಳಲು ಶ್ರೀಮತಿ ಬಂಗೇರ ಅವರಿಗೆ ಯಾವ ಅಧಿಕಾರವೂ ಇಲ್ಲ. ಅಧಿಕಾರ ನೀಡಿದ ಪಕ್ಷಕ್ಕೆ ಇವರು ನಿಷ್ಠರಾಗಿರಬೇಕೇ ಹೊರತು ಅಧಿಕಾರಕ್ಕೆ ಅಂಟಿಕೊಳ್ಳಲು ಪಕ್ಷ ದ್ರೋಹ ಮಾಡುವದನ್ನು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಪಕ್ಷದಿಂದ ಗೆದ್ದು ಬಂದ ಪ್ರತಿನಿಧಿಗಳು ತಲೆ ಬಾಗಲೇಬೇಕಾಗುತ್ತದೆ ಎಂದು ಕುಮುದಾ ಧರ್ಮಪ್ಪ ಹೇಳಿದರು.

ಮೂಡಾ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್ ಮಾತನಾಡಿ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಅವರುಗಳ ಪಕ್ಷ ವಿರೋಧಿ ಚಟುವಟಿಕೆಯನ್ನು ಖಂಡಿಸಿದರು. ಮಹಿಳೆಯರು ಸ್ವಾರ್ಥ ರಾಜಕಾರಣ ಮಾಡುವ ಬದಲು ಜನಪರ ಕಾಳಜಿಯಿಂದ ಅಭಿವೃದ್ಧಿಪರ ರಾಜಕಾರಣ ಮಾಡಬೇಕೆಂದರು. ಜನಸೇವೆ ಮಾಡಲು ಬಂದವರು ಅಧಿಕಾರಕ್ಕೇ ಅಂಟಿಕೊಂಡರೆ ನಗರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಮುಖರಾದ ಫಿಲೋಮಿನಾ ಹಾಗೂ ಸೆರಿನಾ ಮಾತನಾಡಿ ಇಬ್ಬರು ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸ ಬೇಕು ಮತ್ತು ಸದಸ್ಯತ್ವವನ್ನು ರದ್ದು ಗೊಳಿಸÀಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಮಡಿಕೇರಿ ಅಧ್ಯಕ್ಷರಾದ ಮೀನಾಕ್ಷಿ ಕೇಶವ ಹಾಗೂ ಜಯಪ್ರಕಾಶ್ ಉಪಸ್ಥಿತರಿದ್ದರು.