ಶ್ರೀಮಂಗಲ, ಡಿ. 28 : ಶ್ರೀಮಂಗಲ ಪಟ್ಟಣದಿಂದ ಒಂದು ಕಿ.ಮೀ ಅಂತರದಲ್ಲಿ ರೈತರೋರ್ವರ ಕೊಟ್ಟಿಗೆ ಮೇಲೆ ಹುಲಿ ಧಾಳಿ ನಡೆಸಿ ಮಿಶ್ರ ತಳಿಯ ಹಸುವನ್ನು ಕೊಂದು ಭಾಗಶ: ತಿಂದು ಹಾಕಿರುವ ಘಟನೆ ನಡೆದಿದೆ.
ಕುರ್ಚಿ ಗ್ರಾಮದ ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ ಅವರ ಕೊಟ್ಟಿಗೆಯೂ ರಾಜ್ಯ ಹೆದ್ದಾರಿಯ ಒತ್ತಿನಲ್ಲಿಯೇ ಇದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಮಂಗಳವಾರ ರಾತ್ರಿ ಧಾಳಿ ನಡೆದಿದೆ. ಈ ಸಂದರ್ಭ ಕೊಟ್ಟಿಗೆಯಲ್ಲಿ ಈ ಹಸುವಿನೊಂದಿಗೆ ಇತರ ಜಾನುವಾರುಗಳು ಇದ್ದವು. ಆದರೆ ಅವುಗಳ ಮೇಲೆ ಹುಲಿ ಧಾಳಿ ಮಾಡಿಲ್ಲ. ಧಾಳಿ ನಡೆಸಿ ಕೊಂದು ಹಾಕಿ ಹಸುವನ್ನು ಕೊಟ್ಟಿಗೆಯಲ್ಲಿಯೇ ಇತರ ಜಾನುವಾರುಗಳ ಮುಂದೆಯೇ ಧಾಳಿ ನಡೆಸಿದ ಹಸುವನ್ನು ತಿಂದಿದೆ. ಸಮೀಪದಲ್ಲಿ ವಾಸವಾಗಿದ್ದ ಕಾರ್ಮಿಕರಿಗೆ ರಾತ್ರಿಯ ಶಬ್ಧ ಕೇಳಿದ್ದು, ಆದರೆ ಪಟ್ಟಣದ ಸಮೀಪ ಮತ್ತು ಹೆದ್ದಾರಿಯ ಅಂಚಿನಲ್ಲಿ ಹುಲಿ ಧಾಳಿ ನಡೆಸುವ ಯಾವದೇ ಯೋಚನೆ ಇಲ್ಲದ ಕಾರಣ ಗಂಭೀರವಾಗಿ ಯಾರು ಪರಿಗಣಿಸಿಲ್ಲ.
ಬೆಳಗ್ಗೆ ಕೊಟ್ಟಿಗೆಗೆ ಮಾಮೂಲಿನಂತೆ ಜಾನುವಾರುಗಳನ್ನು ಮೇಯಿಸಲು ಕಟ್ಟಲು ಬರುವಾಗ ಘಟನೆ ಗೋಚರಿಸಿದೆ. ಸ್ಥಳದಲ್ಲಿ ಹುಲಿಯ ಜಾಡು ಪತ್ತೆಹಚ್ಚಲು ಡಿಜಿಟಲ್ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮಂಗಲ ವನ್ಯ ಜೀವಿ ಆರ್.ಎಫ್.ಒ ಪೌಲ್ ಆಂಟೋನಿ ತಿಳಿಸಿದ್ದಾರೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಭೇಟಿ ನೀಡಿ ಮಹಜರು ನಡೆಸಿದರು.
ಹುಲಿ ಸೆರೆಗೆ ಆಗ್ರಹ : ಶ್ರೀಮಂಗಲ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಕಾಣಿಸಿಕೊಂಡಿದ್ದು, ಜನರು ಆತಂಕದಲ್ಲಿದ್ದಾರೆ. ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖಾ ಅಧಿಕಾರಿಗಳನ್ನು ಜಿ.ಪಂ. ಸದಸ್ಯ ಶಿವು ಮಾದಪ್ಪ ಆಗ್ರಹಿಸಿದರು.