ಶ್ರೀಮಂಗಲ, ಸೆ. 14: ಕರ್ನಾಟಕ ಕೇರಳ ಗಡಿಭಾಗವಾಗಿರುವ ಶ್ರೀಮಂಗಲದಂತಹ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಜನರು ಸೇರಿ ಗೌರಿ ಗಣೇಶ ಉತ್ಸವ ನಡೆಸುತ್ತಿದ್ದು ಮುಂದೆಯೂ ನಿರಂತರವಾಗಿ ನಡೆಯುವಂತಾಗಲಿ, ಶ್ರೀಮಂಗಲದಲ್ಲಿ ಕಳೆದ 2 ವರ್ಷದಿಂದ ನಡೆಯುತ್ತಿರುವ ಉತ್ಸವದಲ್ಲಿ ಎಲ್ಲಾ ಜಾತಿ ಧರ್ಮದ ಜನರು ಸೇರಲು, ವಿವಿಧ ಕಲಾತಂಡಗಳಿಗೆ ವೇದಿಕೆ ಕಲ್ಪಿಸಲು ಅವಕಾಶ ನೀಡಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಹೇಳಿದರು.
ಅವರು ಶ್ರೀಮಂಗದಲ್ಲಿ ಶ್ರೀಮಂಗಲ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಆಚರಿಸಲ್ಪಡುತ್ತಿರುವ ಗೌರಿ ಗಣೇಶ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಮಿತಿ ವತಿಯಿಂದ ಗಣೇಶ ಉತ್ಸವ ಅದ್ಧೂರಿಯಾಗಿ ಕಳೆದ 9 ದಿನದಿಂದ ಯಶಸ್ವಿಯಾಗಿ ನಡೆದಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಇಂತಹ ಕಾರ್ಯಕ್ರಮ ಅಗತ್ಯವಾಗಿದೆ ಎಂದು ಸಂಘಟಕರನ್ನು ಶ್ಲಾಘಿಸಿದರು.
ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾದರನಾಥ್ ತಿಲಕ್ ಅವರು ಮುಂಬೈನಲ್ಲಿ ಜನರನ್ನು ಒಂದೆಡೆ ಸೇರಿಸಲು ಗೌರಿ ಗಣೇಶ ಉತ್ಸವ ಆಚರಿಸಲು ನಿರ್ಧರಿಸಿದರು. ಇದೀಗ ದೇಶವ್ಯಾಪಿಯಾಗಿ ಈ ಉತ್ಸವ ನಡೆಯುತ್ತಿದೆ. ಶ್ರೀಮಂಗಲದಲ್ಲಿ ನಡೆಯುತ್ತಿರುವ ಈ ಉತ್ಸವದಿಂದ ದೂರದರ್ಶನ, ಚಲನಚಿತ್ರದ ಪರದೆಗಳಲ್ಲಿ ಕಲಾವಿದರಿಂದ ಪ್ರದರ್ಶನಗಳನ್ನು ನೋಡುತ್ತಿದ್ದ ಸ್ಥಳೀಯ ಜನರು ಪ್ರತ್ಯಕ್ಷವಾಗಿ ನೋಡುವಂತಾಗಿದೆ. ಇನ್ನೊಂದು ಕಡೆ ಇದೊಂದು ಧಾರ್ಮಿಕ ಆಚರಣೆಯಾಗಿದ್ದು ಜನರಲ್ಲಿ ಧಾರ್ಮಿಕ ಭಯಭಕ್ತಿ ಮೂಡುವಂತಾಗಿದೆ ಎಂದು ಹೇಳಿದರು.
ಉತ್ಸವ ಸಮಿತಿಯ ಪ್ರಮುಖ ಅಜ್ಜಮಾಡ ಜಯಾ ಮಾತನಾಡಿ ಕಳೆದ 9 ದಿನಗಳಿಂದ ಪ್ರತಿ ದಿನ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ, ಆಗಮಿಸಿದ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲು ಸಮಿತಿಯ ಎಲ್ಲರ ಶ್ರಮ ಹಾಗೂ ಧಾನಿಗಳ ನೆರವಿನಿಂದ ಸಾಧ್ಯವಾಗಿದೆ ಎಂದು ಸ್ಮರಿಸಿದರು. ಉತ್ಸವದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗಿದೆ. ಸಾವಿರಾರು ಜನ ಸೇರಿದರೂ ಪಟ್ಟಣದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಬಾಚಂಗಡ ದಾದಾ ದೇವಯ್ಯ ಅಧÀ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಅಜ್ಜಮಾಡ ಹ್ಯಾರಿ, ಶ್ರೀಮಂಗಲ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಗ್ರಾ.ಪಂ ಸದಸ್ಯೆ ಚೋಕಿರ ಕಲ್ಪನಾ, ವಾಹನ ಮಾಲೀಕರ ಸಂಘದ ಕೊಳೇರ ಕಾಶಿ, ಚಾಲಕರ ಸಂಘದ ಮುರುಳಿ, ಕಳ್ಳಿಚಂಡ ಪರಶುರಾಮ್, ಎ.ಪಿ ಕುಶಾಲಪ್ಪ, ಐಪುಮಾಡ ಶಂಭು, ಐಯ್ಯಮಾಡ ಉದಯ, ಕೆ.ಎನ್ ಸಂದೀಪ್, ಬೋಡಂಗಡ ಅಯ್ಯಪ್ಪ, ಬೊಳ್ಳಜೀರ ಅಶೋಕ, ಕೊಳೇರ ಬಾಬು, ನಾಗೇಶ್ ಮತ್ತಿತರರು ಹಾಜರಿದ್ದರು. ಚೋಕಿರ ಕಲ್ಪನಾ ಪ್ರಾರ್ಥಿಸಿ, ಶಿಕ್ಷಕ ಶ್ರೀನಿವಾಸ್ ನಿರೂಪಿಸಿ, ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ವಂದಿಸಿದರು.
ಗಮನ ಸೆಳೆದ ಮೆರವಣಿಗೆ ಗೌರಿ ಗಣೇಶ ಮೂರ್ತಿ ವಿಸರ್ಜನೆ
ಶ್ರೀಮಂಗಲದಲ್ಲಿ ತಾ. 5 ರಂದು ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾಲಗದೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಸಮೀಪದ ಲಕ್ಷ್ಮಣ ತೀರ್ಥ ನದಿಯಲ್ಲಿ ಮಂಗಳವಾರ ರಾತ್ರಿ ವಿಸರ್ಜಿಸಲಾಯಿತು. ಈ ಸಂಧರ್ಭ ಪಟ್ಟಣದಿಂದ ಅಲಂಕೃತ ಮೂರ್ತಿಯೊಂದಿಗೆ ನೂರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ತೆರಳಿ ವಿಸರ್ಜನೆ ಮಾಡಿದರು. ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್ ಅಲಂಕಾರದ ದೀಪಗಳ ವೈಭವ ಕಂಡು ಬಂತು. ಇದೇ ಮೊದಲ ಬಾರಿಗೆ ಅಧಿಕ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ಸೇರಿದ ಎಲ್ಲರಿಗೂ ದಾನಿಗಳ ನೆರವಿನಿಂದ ಕಳೆದ 9 ದಿನದಿಂದಲೂ ಅನ್ನದಾನ ಮಾಡಿರುವುದು ವಿಶೇಷವಾಗಿತ್ತು.
ರಂಜಿಸಿದ ರಸಮಂಜರಿ
ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಿವು ಮ್ಯೂಸಿಕಲ್ ತಂಡದಿಂದ ರಸಮಂಜರಿ ಏರ್ಪಡಿಸಲಾಗಿತ್ತು. ವಿವಿಧ ಹಾಡು, ನೃತ್ಯದಿಂದ ರಂಜಿಸಿದ ಕಲಾವಿದರು ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಸ್ಥಳೀಯ ಜನರೊಂದಿಗೆ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೋರಂಜನೆ ಪಡೆದರು. ಈ ಸಂದರ್ಭ ವೀರಾಜಪೇಟೆ ತಾಲೂಕು ಡಿ.ವೈ.ಎಸ್.ಪಿ ಕುಮಾರ್ ಚಂದ್ರ ನೇತೃತ್ವದಲ್ಲಿ ಕುಟ್ಟ ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಶ್ರೀಮಂಗಲ ಠಾಣಾಧಿಕಾರಿ ಶ್ರೀಧರ್ ಸಿಬ್ಬಂದಿಗಳೊಂದಿಗೆ ವಿಶೇಷ ಬಂದೋಬಸ್ತ್ ಕಲ್ಪಿಸಿದ್ದರು.