ಸೋಮವಾರಪೇಟೆ, ಸೆ. 16: ರೈತರು ಶ್ರೀಗಂಧವನ್ನು ಉಪ ಬೆಳೆಯನ್ನಾಗಿ ಬೆಳೆಯುವ ಮೂಲಕ ಅದರ ಪುನಶ್ಚೇತನಕ್ಕೂ ಮುಂದಾಗಬೇಕು. ಆ ಮೂಲಕ ಆರ್ಥಿಕ ಪ್ರಗತಿ ಸಾಧಿಸುವಂತಾಗ ಬೇಕು ಎಂದು ಬೆಂಗಳೂರಿನ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಸುರೇಂದ್ರ ಕುಮಾರ್ ಕರೆ ನೀಡಿದರು.

ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ರೈತರಿಗೆ ಶ್ರೀಗಂಧ ಮರಗಳನ್ನು ಬೆಳೆಸುವದು, ಕಟಾವು ಮಾಡುವದು, ರಕ್ಷಣೆ ಹಾಗೂ ಮಾರಾಟ ಮಾಡುವ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯವು ಇತಿಹಾಸ ಕಾಲದಿಂದಲೂ ಇಂದಿನವರೆಗೆ ಉತ್ತಮ ಜಾತಿಯ ವೃಕ್ಷ ಸಮೂಹ ವನ್ನು ಹೊಂದಿದೆ. ಶ್ರೀಗಂಧವು ಇಂದು ವಾಣಿಜ್ಯ ಮಹತ್ವವನ್ನು ಪಡೆದುಕೊಂಡಿದ್ದು, 9 ಪ್ರಭೇದಗಳನ್ನು ಒಳಗೊಂಡಿದೆ. ಪ್ರಪಂಚದ ಒಟ್ಟು ಉತ್ಪಾದನೆಯ ಶೇಕಡ 85ರಷ್ಟು ಭಾರತ ದೇಶದಲ್ಲಿ ಶ್ರೀಗಂಧ ಉತ್ಪಾದನೆಯಾಗುತ್ತಿದೆ. ಕರ್ನಾಟಕ ರಾಜ್ಯವು ನಮ್ಮ ದೇಶದ ಉತ್ಪಾದನೆಯ ಶೇಕಡ 70ರಷ್ಟು ಶ್ರೀಗಂಧದ ಉತ್ಪಾದನೆ ಮಾಡುತ್ತಿದೆ. ರೈತರು ಶ್ರೀಗಂಧವನ್ನು ಪುನಶ್ಚೇತನ ಗೊಳಿಸುವದರೊಂದಿಗೆ ರಾಜ್ಯಕ್ಕೂ ಹಾಗೂ ದೇಶದ ಆರ್ಥಿಕ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಬೇಕೆಂದು ಹೇಳಿದರು.

ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧಿಕಾರಿ ಡಾ. ಪಂಕಜ್ ಅಗರ್‍ವಾಲ್ ಮಾತನಾಡಿ, ಇಂದು ಶ್ರೀಗಂಧದ ಮರಗಳು ವಿನಾಶದ ಅಂಚಿನಲ್ಲಿದೆ. ಕಳೆದ 25 ವರ್ಷಗಳಿಂದ ಶ್ರೀಗಂಧದ ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ಕುಂಠಿತ ವಾಗಿದೆ. ಶ್ರೀಗಂಧದ ಉತ್ಪಾದನೆಗೆ ರೈತರು ಮುಂದಾಗಬೇಕು. ಸಂಸ್ಥೆಯ ಜೊತೆ ಕೈಜೋಡಿಸಿ ಹೆಚ್ಚು ಹೆಚ್ಚು ಶ್ರೀಗಂಧ ಮರಗಳನ್ನು ಬೆಳೆದು ಹೆಚ್ಚಿನ ಆದಾಯ ಪಡೆಯುವತ್ತ ಚಿಂತನೆ ನಡೆಸಬೇಕೆಂದರು.

ವೇದಿಕೆಯಲ್ಲಿ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತಿನ ಮಾಜಿ ಸದಸ್ಯ ಕೆ.ಟಿ. ಪರಮೇಶ್ ಉಪಸ್ಥಿತರಿದ್ದರು. ಶ್ರೀಗಂಧ ಬೆಳೆಸುವದು, ಕಟಾವು ಹಾಗೂ ಬೆಳೆಯುವ ವಿಧಾನ, ರಕ್ಷಣೆ ಕುರಿತು ಸಂಸ್ಥೆಯ ಸಂಶೋಧನಾಧಿ ಕಾರಿಗಳಾದ ಡಾ. ಪಿ.ವಿ. ಸೋಮಶೇಖರ್ ಮತ್ತು ಡಾ. ಕೆ.ಟಿ. ಚಂದ್ರಶೇಖರ್ ಮಾಹಿತಿ ನೀಡಿದರು.