ಮಡಿಕೇರಿ, ಜ. 15: ಜಿಲ್ಲೆಯ ವಿವಿಧೆಡೆ ಸಂಕ್ರಾಂತಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಹಿಂದೂಗಳಿಗೆ ನೂತನ ವರ್ಷಾರಂಭದಲ್ಲಿ ಬರುವ ಮೊದಲ ಹಬ್ಬವಾಗಿದ್ದು, ಬೆಳಿಗ್ಗೆಯಿಂದಲೇ ಕುಟುಂಬ ಸಮೇತ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಪರಸ್ಪರ ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 27ನೇ ವರ್ಷದ ಸಂಕ್ರಾಂತಿ ಮಹೋತ್ಸವ ಜರುಗಿತು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಗಣಪತಿ ಹೋಮ, ಮುತ್ತಪ್ಪ ಹಾಗೂ ಸುಬ್ರಹ್ಮಣ್ಯ ದೇವರ ಪೂಜೆ, ಅಭಿಷೇಕಗಳು, ಮಹಾಮಂಗಳಾರತಿ, ದೀಪರಾಧಾನೆ ಸೇವೆಗಳು ನಡೆಯಿತು. ಬಳಿಕ ಪ್ರಸಾದ ವಿನಿಯೋಗ ನಡೆಯಿತು.