ಮಡಿಕೇರಿ, ನ. 17 : ಐಗೂರು ಗ್ರಾಮದಲ್ಲಿ ನಡೆದಿರುವ ಪವಿತ್ರ ಗ್ರಂಥ ಕುರ್ಆನ್ ಹಾಗೂ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಅತ್ಯಂತ ಖಂಡನೀಯವಾಗಿದ್ದು, ಈ ಎರಡೂ ಪ್ರಕರಣಗಳ ತನಿಖೆಯ ನಂತರ ಬಿಜೆಪಿ ಹಾಗೂ ಸಂಘ ಪರಿವಾರದ ಬಣ್ಣ ಬಯಲಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಘಟನೆಯ ಪೂರ್ವಾಪರ ತಿಳಿಯದೆ ಸಂಸದೆ ಶೋಭಾಕರಂದ್ಲಾಜೆ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜವನ್ನು ಪ್ರಚೋದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಧರ್ಮಗ್ರಂಥಗಳು ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿದ್ದು, ಪ್ರತಿ ಯೊಂದು ಧರ್ಮದಲ್ಲಿ ಗ್ರಂಥಗಳಿಗೆ ತನ್ನದೇ ಆದ ಸ್ಥಾನಮಾನವಿದೆ. ಪವಿತ್ರ ಕುರ್ಆನ್ ಗ್ರಂಥವನ್ನು ಸುಟ್ಟಿರುವದು ಅತ್ಯಂತ ಹೇಯ ಕೃತ್ಯವಾಗಿದ್ದು, ಇದನ್ನು ಜಾತಿ, ಮತ, ಭೇದ ಮರೆತು ಖಂಡಿಸಬೇಕಾಗಿದೆ. ಆದರೆ ಈ ಘಟನೆಯನ್ನೇ ಆಧಾರವಾಗಿಟ್ಟು ಕೊಂಡು ಬಿಜೆಪಿ ಹಾಗೂ ಸಂಘ ಪರಿವಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪವಿತ್ರ ಕುರ್ಆನ್ ಗ್ರಂಥಕ್ಕೆ ಬೆಂಕಿ ಹಚ್ಚಿದ ನಂತರ ಪದ್ಮನಾಭ ಎಂಬವರ ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಮಸೀದಿಯಲ್ಲಿ ನಡೆದ ದುಷ್ಕøತ್ಯದ ಹಾದಿ ತಪ್ಪಿಸುವ ಉದ್ದೇಶದಿಂದ ಕಾರಿಗೆ ಬೆಂಕಿ ಹಾಕಿದ ಪ್ರಸಂಗವನ್ನು ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯರೇ ಅಲ್ಲದ ಸಂಸದೆ ಶೋಭಾ ಕರಂದ್ಲಾಜೆ ಅವರು ದಿಢೀರ್ ಆಗಿ ಐಗೂರು ಗ್ರಾಮಕ್ಕೆ ಭೇಟಿ ನೀಡಿ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿರಲಿಲ್ಲವೆಂದು ಹೇಳಿದ್ದಾರೆ. ಯಾರೋ ಹೇಳಿಕೊಟ್ಟ ಮಾತುಗಳನ್ನು ಪ್ರಚಾರಕ್ಕಾಗಿ ಪುನರ್ ಉಚ್ಚರಿಸುವ ಮೂಲಕ ಕೀಳುಮಟ್ಟದ ರಾಜಕಾರಣ ವನ್ನು ಪ್ರದರ್ಶಿಸಿ ಕೊಡಗಿನಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಮಸೀದಿ ಇರುವ ಪ್ರದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮುಸಲ್ಮಾನ ಬಂಧುಗಳಿದ್ದು, ಪ್ರತಿ ಶುಕ್ರವಾರ ಇಲ್ಲಿ ಪ್ರಾರ್ಥನೆ ನಡೆಯುತ್ತದೆ. ಪ್ರಾರ್ಥನೆಗೆಂದು ಬಂದವರ ವಾಹನಗಳನ್ನು ಜಖಂ ಮಾಡುವ ಮೂಲಕ ಕೋಮುವಾದಿ ಗಳು ಭಯದ ವಾತಾವರಣವನ್ನು ಇಲ್ಲಿ ಸೃಷ್ಟಿಸಿದ್ದಾರೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.
ದಿಢೀರ್ ಆಗಿ ಐಗೂರಿನ ವಕೀಲ ಪದ್ಮನಾಭ ಅವರನ್ನು ಆರ್ಎಸ್ಎಸ್ ಮುಖಂಡ ಎಂದು ಪ್ರತಿಬಿಂಬಿಸಿರುವ ಸಂಘ ಪರಿವಾರ ಶಾಸಕರುಗಳನ್ನು ಮುಂದಿಟ್ಟುಕೊಂಡು ರಾಜಕೀಯ ಕುಮ್ಮಕ್ಕು ನೀಡುತ್ತಿದೆ. ಶಾಸಕರುಗಳು ಕೂಡ ತಾರತಮ್ಯ ಧೋರಣೆಯನ್ನು ಪ್ರದರ್ಶಿಸಿದ್ದು, ಪದ್ಮನಾಭ ಅವರಿಗೆ ಮಾತ್ರ ಸಾಂತ್ವನ ಹೇಳಿದ್ದಾರೆ. ಆದರೆ ಧರ್ಮಗ್ರಂಥ ಸುಟ್ಟು ಹೋಗಿ ಮಾನಸಿಕವಾಗಿ ನೊಂದಿರುವ ಮುಸಲ್ಮಾನ ಬಾಂಧವರಿಗೆ ಮಾನಸಿಕ ಸ್ಥೈರ್ಯ ತುಂಬುವ ಮತ್ತು ಮಸೀದಿಗೆ ಭೇಟಿ ನೀಡಿ ಪರಿಶೀಲಿಸುವ ಕನಿಷ್ಟ ಸೌಜನ್ಯವನ್ನೂ ತೋರದ ಶಾಸಕರುಗಳು ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ. ಜಿಲ್ಲೆಯಲ್ಲಿರುವ ಶಾಸಕರುಗಳು ಕೇವಲ ಬಿಜೆಪಿ ಮಂದಿಗಷ್ಟೇ ಶಾಸಕರೇ ಎಂದು ಅವರು ಪ್ರಶ್ನಿಸಿದ್ದಾರೆ.
ಕುರ್ಆನ್ ಹಾಗೂ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದ ಕೂಲಂಕುಷ ತನಿಖೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಬಿಜೆಪಿ ಹಾಗೂ ಸಂಘ ಪರಿವಾರದ ಬಣ್ಣ ಬಯಲಾಗಲಿದೆ ಎಂದು ಮಂಜುನಾಥ್ ಕುಮಾರ್ ಹೇಳಿದ್ದಾರೆ.
ಟಿಪ್ಪು ಜಯಂತಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗದ ಬಿಜೆಪಿ ಈ ಪ್ರಕರಣವನ್ನು ದೊಡ್ಡದು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.