ವೀರಾಜಪೇಟೆ, ಅ. 10: “ಸರಕಾರದ ಸೌಲಭ್ಯಗಳ ಸದ್ಬಳಕೆಯಿಂದ ಮಾತ್ರ ಗುಣಮಟ್ಟದ ಶಿಕ್ಷಣ ಸಾಧ್ಯ” ಎಂದು ವೀರಾಜಪೇಟೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅಭಿಪ್ರಾಯಪಟ್ಟಿದ್ದಾರೆ . ಅವರು ಇಂದು ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಸಭಾಂಗಣ ದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಏರ್ಪಡಿಸಿ ರುವ ಹತ್ತು ದಿನಗಳ ವಿಶೇಷ ಶೈಕ್ಷಣಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ದರು. “ಪರಿಶಿಷ್ಟ ಜಾತಿ- ಪಂಗಡ ವಿಭಾಗದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಂತೆ ಫಲಿತಾಂಶದಲ್ಲಿ ಮತ್ತು ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ವಂಚಿತರಾಗ ಬಾರದೆಂದು ಸರಕಾರದ ಯೋಜನೆಯ ಉದ್ದೇಶವಾಗಿದೆ. ಗುಣಾತ್ಮಕ ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ಟೆನ್ನಿ ಕುರಿಯನ್ ಮಾತನಾಡಿ, “ವಿದ್ಯಾರ್ಥಿ ಗಳು ಸರಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡಲ್ಲಿ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ಮಾನವೀಯತೆಯಿಂದ ಕೂಡಿದ ಮತ್ತು ನೈತಿಕ ಮೌಲ್ಯಗಳಿಗೆ ಒತ್ತು ನೀಡುವ ಶಿಕ್ಷಣ ಕಾಲದ ಬೇಡಿಕೆ ಯಾಗಿದೆ. ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳೂ ಉತ್ತಮ ಶಿಕ್ಷಣ ದೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ” ಎಂದರು. ಮುಖ್ಯ ಅತಿಧಿಗಳಾಗಿದ್ದ ಸಂತ ಅನ್ನಮ್ಮ ದೇವಾಲಯದ ಮುಖ್ಯಸ್ಥ ರೆ||ಫಾ||. ಮದುಲೈ ಮುತ್ತು ಮಾತನಾಡಿ, “ಜ್ಞಾನವೆಂಬದು ಅತಿ ಅಮೂಲ್ಯ ವಾದದ್ದು. ಜ್ಞಾನಕ್ಕಿಂತ ಮಿಗಿಲಾದುದು ಬೇರೆ ಯಾವದೂ ಇಲ್ಲ. ಆದ್ದರಿಂದ ಜ್ಞಾನ ಎಲ್ಲಿಂದ ಲಭಿಸಿದರೂ ಅಲ್ಲಿಂದ ಪಡೆದುಕೊಳ್ಳಬೇಕು.”ಎಂದರು.

ತಿತಿಮತಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜಣ್ಣ ಈ ಸಂದರ್ಭದಲ್ಲಿ ಮಾತನಾಡಿದರು. ಕನ್ನಡ ಉಪನ್ಯಾಸಕ ಅರ್ಜುನ್ ಸ್ವಾಗತಿಸಿದರು. ವಿದ್ಯಾರ್ಥಿ ಸಚಿನ್ ಧನ್ಯವಾದವಿತ್ತರು.