ಪೊನ್ನಂಪೇಟೆ, ಜ. 19: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಪ್ರಚಾರಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವದು ಅವರ ಸ್ಥಾನಕ್ಕೆ ಶೋಭೆ ತರುವದಿಲ್ಲ. ಶಾಸಕರು ಗೌರವದಿಂದ ರಾಜಕಾರಣ ಮಾಡುವದನ್ನು ಇನ್ನಾದರು ರೂಡಿಸಿಕೊಳ್ಳಲಿ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಲಹೆ ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎ.ಎಸ್. ಟಾಟು ಮೊಣ್ಣಪ್ಪ, ಕಾಡ್ಯಮಾಡ ಚೇತನ್ ಮತ್ತು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ಕೆ.ಎಂ. ಸರ ಚಂಗಪ್ಪ ಅವರು, ತಾವು ಏನೇ ಮಾಡಿದರೂ ಕ್ಷೇತ್ರದ ಜನತೆ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ಬೋಪಯ್ಯ ನಂಬಿದರೆ ಅದು ತಪ್ಪು. ತಮ್ಮ ಹಿಂಬಾಲಕರ ಮಾತು ಕೇಳಿ ಪ್ರಚಾರ ಗಿಟ್ಟಿಸಲು ತಮ್ಮ ವ್ಯಾಪ್ತಿ ಮೀರಿ ವರ್ತಿಸಿದರೆ ಅದರಿಂದ ಬರುವ ಪ್ರತಿಫಲ ಯಾವದೇ ಜನಪ್ರತಿನಿಧಿಯ ವ್ಯಕ್ತಿತ್ವಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷವನ್ನು ತೇಜೋವಧೆ ಮಾಡುವ ಭರದಲ್ಲಿ ಶಾಸಕರು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಟ್ಟ ಸಮೀಪದ ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯ ಅಲಂದೋಡು ಗಿರಿಜನ ಕಾಲೋನಿಗೆ ಹೋಗುವ ರಸ್ತೆಯನ್ನು ಕರ್ನಾಟಕ ಸರಕಾರದ ಐ.ಟಿ.ಡಿ.ಪಿ ಇಲಾಖೆಯ ವತಿಯಿಂದ 35 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಈ ಕಾಮಗಾರಿಯನ್ನು ತಾ. 13 ರಂದು ಕೆ. ಬಾಡಗ ಗ್ರಾ.ಪಂ. ಅಧ್ಯಕ್ಷೆ ಕೆ.ಎಂ.ಉಷಾ, ಜಿ.ಪಂ. ಸದಸ್ಯರಾದ ಶಿವು ಮಾದಪ್ಪ ಮತ್ತು ಬಾನಂಡ ಪ್ರಥ್ಯು ಜಂಟಿಯಾಗಿ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಿದ್ದರು.
ಹೀಗಿದ್ದು ಬಿ.ಜೆ.ಪಿ.ಯವರೊಡಗೂಡಿ ಶಾಸಕ ಕೆ.ಜಿ. ಬೋಪಯ್ಯ ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಉದ್ಘಾಟನೆ ಮಾಡಿದ ಕಾಮಗಾರಿಯನ್ನೇ ಮತ್ತೊಮ್ಮೆ ಉದ್ಘಾಟನೆ ಮಾಡಿ ಪ್ರಚಾರ ಗಿಟ್ಟಿಸಲು ಪ್ರಯತ್ನಿಸಿರುವದು ಕೀಳುಮಟ್ಟದ ರಾಜಕೀಯ ಎಂದು ಹೇಳಿದ್ದಾರೆ. ಜಿಲ್ಲೆಯ ಓರ್ವ ಸಾರ್ವಜನಿಕ ನಾಯಕರಾಗಿದ್ದ ಬಿ.ಟಿ.ಪ್ರದೀಪ್ ಅಕಾಲಿಕವಾಗಿ ನಿಧನರಾದ ದಿನದಂದೇ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾ ಉದ್ಘಾಟನೆಯ ನಾಟಕವಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಕ್ಷೇತ್ರದ ಜನತೆಗೆ ಶಾಸಕರೇ ಉತ್ತರ ನೀಡಲಿ ಎಂದು ಹೇಳಿದ್ದಾರೆ.