ಮಡಿಕೇರಿ, ಸೆ.2 : ತಿತಿಮತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗಿರಿಜನರ 12 ಹಾಡಿಗಳಿಗೆ ಶಾಸಕರ ನಿಧಿಯಿಂದ ಯಾವದೇ ಅನುದಾನ ವನ್ನು ನೀಡದೆ, ಶಾಸಕ ಕೆ.ಜಿ. ಬೋಪಯ್ಯ ಅವರು ಹಾಡಿಗಳನ್ನು ಕಡೆಗಣಿಸಿದ್ದಾರೆ ಎಂದು ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯೆ ಪಂಕಜ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೆ ವೀರಾಜಪೇಟೆ ತಾಲೂಕಿನಲ್ಲಿ 1,020 ಮಂದಿಗೆ ಹಕ್ಕು ಪತ್ರ ನೀಡಲಾಗಿದೆ ಎಂದರು. ಆದರೆ, ಇತ್ತೀಚೆಗೆ ಅಧಿಕಾರಿಗಳು ಶಾಸಕರ ಪ್ರಭಾವಕ್ಕೆ ಒಳಗಾಗಿ 23 ಹಕ್ಕು ಪತ್ರಗಳನ್ನು ತಮ್ಮ ಗಮನಕ್ಕೆ ತಾರದೆ ವಿತರಿಸಿದ್ದಾರೆ. ತಾವು ಗಿರಿಜನ ಸಮುದಾಯಕ್ಕೆ ಸೇರಿದ ಜನ ಪ್ರತಿನಿಧಿಯಾಗಿದ್ದರೂ ತಮ್ಮನ್ನು ಕಡೆಗಣಿಸಿ ಶಾಸಕರು ತಮ್ಮ ರಾಜಕೀಯ ಪ್ರಭಾವÀವನ್ನು ಬಳಸಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವದಾಗಿ ಆರೋಪಿಸಿದರು.

ತಿತಿಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ತಿತಿಮತಿ ವ್ಯಾಪ್ತಿಯ ಹಾಡಿಗಳ ಸುತ್ತಮುತ್ತ ಕಳ್ಳಭಟ್ಟಿ ದಂಧೆ ನಡೆಯುತ್ತಿರುವದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂದರು. ಅಬಕಾರಿ ಅಧಿಕಾರಿಗಳು ಧಾಳಿ ನಡೆಸಿದ ಸಂದರ್ಭ ತಮ್ಮನ್ನು ಕರೆದು ದಂಧೆಯ ಕುರಿತು ಸಾಕ್ಷೀಕರಿಸಿದ್ದಾರೆ. ಇತರರನ್ನು ಪ್ರಭಾವಿಗಳೆಂದು ಟೀಕಿಸುತ್ತಿರುವವರೇ ಪ್ರಭಾವಿ ಗಳಾಗಿದ್ದು, ಇವರುಗಳಿಂದಲೇ ಕಳ್ಳಭಟ್ಟಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗಾಗಲೆ ಪತ್ರದ ಮೂಲಕ ದೂರು ನೀಡಲಾಗಿದೆ ಎಂದು ತಿಳಿಸಿದರು.

ಗಿರಿಜನ ಅಭಿವೃದ್ಧಿ ಇಲಾಖೆಯಿಂದ ಹಾಡಿಗಳ ಅಭಿವೃದ್ಧಿಗೆ ಅನುದಾನ ಬಂದಿದೆಯೆ ಹೊರತು ಶಾಸಕರು ಯಾವದೇ ಅನುದಾನ ನೀಡಿಲ್ಲವೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಶಾಂತಮ್ಮ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮುಸ್ತಫ ಉಪಸ್ಥಿತರಿದ್ದರು.