ಕುಶಾಲನಗರ, ಆ. 8: ಒಂದೇ ಆವರಣದಲ್ಲಿ ಎರಡು ಶಾಲೆಗಳಿಗೆ ನಿಯಮ ಬಾಹಿರವಾಗಿ ಅನುಮತಿ ಕಲ್ಪಿಸಿದ ಶಿಕ್ಷಣ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿರುವದಾಗಿ ಸ್ಥಳೀಯ ಖಾಸಗಿ ವಿದ್ಯಾಸಂಸ್ಥೆಯ ಮಾಲೀಕ ಮುಬೀನಾ ತಾಜ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಪಟ್ಟಣದ ಬ್ರಿಲಿಯಂಟ್ ಬ್ಲೂಮ್ ಶಾಲೆಯ ಪ್ರಮುಖರಾದ ಅವರು, 2002ರಲ್ಲಿ ತನ್ನ ವಿದ್ಯಾಸಂಸ್ಥೆ ಕುಶಾಲನಗರದಲ್ಲಿ ಪ್ರಾರಂಭಗೊಂಡಿದ್ದು ಪ್ರಸಕ್ತ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಸತ್ಯಸಾಯಿ ಕಾಲೇಜು ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದೇ ಕಟ್ಟಡದಲ್ಲಿ ಕಟ್ಟಡದ ಮಾಲೀಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಇನ್ನೊಂದು ಶಿಕ್ಷಣ ಸಂಸ್ಥೆ ನಡೆಸಲು ಅನುಮತಿ ಕಲ್ಪಿಸಿರುವದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ 6 ವರ್ಷಗಳಿಂದ ಇದೇ ರೀತಿಯಲ್ಲಿ ತನಗೆ ಕಿರುಕುಳ ಮುಂದುವರೆಯುತ್ತಿದ್ದು ತನ್ನ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯರು, ನೌಕರರನ್ನು ಆಮಿಷವೊಡ್ಡಿ ಸೇರ್ಪಡೆ ಗೊಳಿಸುವದರೊಂದಿಗೆ ತನ್ನ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಕೂಡ ಆ ಶಾಲೆಯ ಪಾಲಾಗುವಂತೆ ಹುನ್ನಾರ ನಡೆಸÀಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಡಿಕೇರಿ ಶಿಕ್ಷಣ ಇಲಾಖಾ ಅಧಿಕಾರಿಗಳಿಗೂ ದೂರು ನೀಡಿದರೂ ಯಾವದೇ ರೀತಿಯ ಕ್ರಮಕೈಗೊಂಡಿಲ್ಲ. ಸ್ಥಳೀಯ ಖಾಸಗಿ ಬಸ್ ನಿಲ್ದಾಣವನ್ನು ಶಾಲೆಯ ಬಸ್‍ಗಳ ನಿಲುಗಡೆ ಕೇಂದ್ರವಾಗಿಸಿರುವ ಬಗ್ಗೆಯೂ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ತನ್ನ ಸಂಸ್ಥೆಗೆ ಈ ಮೂಲಕ ತೊಂದರೆಯುಂಟಾಗು ತ್ತಿದ್ದು ಕಳೆದ 6 ವರ್ಷಗಳಲ್ಲಿ ಭಾರೀ ನಷ್ಟ ಹಾಗೂ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ ಎಂದಿರುವ ಮುಬೀನ ತಾಜ್ ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.

ಅಲ್ಪಸಂಖ್ಯಾತಳಾದ ತಾನು ಕಷ್ಟಪಟ್ಟು ಕಳೆದ 15 ವರ್ಷಗಳಿಂದ ವಿದ್ಯಾಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು ಈ ರೀತಿಯ ಕಿರುಕುಳವನ್ನು ತಪ್ಪಿಸಿ ತನಗೆ ನ್ಯಾಯ ದೊರಕಿಸ ಬೇಕೆಂದು ಮುಬೀನ ತಾಜ್ ಪತ್ರಿಕೆ ಮೂಲಕ ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದ್ದಾರೆ.